ಕೇರಳದ ಮಾಜಿ ಸಿ.ಎಂ ಪಿಣರಾಯಿ ವಿಜಯನ್ ಹಾಗೂ ಮತ್ತಿತರರ ವಿರುದ್ಧ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ವರದಿ ಆಧರಿಸಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಮಹತ್ವದ ಆದೇಶ ಮಾಡಿದೆ.
ಅಡ್ವೊಕೇಟ್ ಕೆ ಎಂ ಶಹಜಹಾನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ ಬದರುದ್ದೀನ್ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ. ಪೊಲೀಸರು ಇಡಿ ನೀಡಿದ ವರದಿ ಆಧಾರದ ಮೇಲೆ ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿಲ್ಲ, ಬದಲಿಗೆ ನೇರವಾಗಿ ಎಫ್ಐಆರ್ ದಾಖಲಿಸಬೇಕು ಎಂದು ಅರ್ಜಿದಾರರು ಕೋರಿದ್ದರು ಎಂದು ಮೂಲಗಳಿಂದ ವರದಿಯಾಗಿದೆ.
ರಾಜ್ಯ ಪೊಲೀಸರಿಗೆ ಸಲ್ಲಿಸಿದ ವರದಿಯ ಆಧಾರದ ಮೇಲೆ ಮಾಜಿ ಸಿಎಂ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಟಿ. ಹಾಗೂ ಅವರ ಪತಿ ಪಿ.ಎ. ಮೊಹಮ್ಮದ್ ರಿಯಾಸ್ ವಿರುದ್ಧ ಎಫ್ಐಆರ್ ದಾಖಲಿಸಬಹುದು ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು. ಕಾನೂನು ಬಾಹಿರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ನಡೆಸಿದ ತನಿಖೆ ಮತ್ತು ಶೋಧ ಕಾರ್ಯಾಚರಣೆಯ ವೇಳೆ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪ್ರಕರಣ ದಾಖಲಿಸುವಂತೆ ಇಡಿ ಕೋರಿತ್ತು.
ಆದರೆ ಈ ವಾದವನ್ನು ಬಲವಾಗಿ ವಿರೋಧಿಸಿದ್ದ ರಾಜ್ಯ ಸರ್ಕಾರ, ಇಡಿ ನೀಡಿದ ವರದಿ ಎಫ್ಐಆರ್ ದಾಖಲಿಸಲು ಸಾಲದು ಮತ್ತು ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವ ಅಗತ್ಯ ವಿದೆ ಎಂದು ವಾದಿಸಿತ್ತು. ಇತ್ತೀಚೆಗೆ ಕೇರಳದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರವು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಇಡಿ ಬರೆದ ಪತ್ರದ ಆಧಾರದ ಮೇಲೆ ತನಿಖೆಗೆ ಆದೇಶಿಸಿತ್ತು.
ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ ಕಂಪನಿಯು ಐಟಿ ಕನ್ಸಲ್ಟೆನ್ಸಿ ಸೇವೆಗಳ ಹೆಸರಿನಲ್ಲಿ ವೀಣಾ ಅವರ ಈಗ ಮುಚ್ಚಲ್ಪಟ್ಟಿರುವ ಎಕ್ಸಾಲಿಜಿಕ್ ಸೊಲ್ಯೂಷನ್ಸ್ ಕಂಪನಿಗೆ 2.78 ಕೋಟಿ ರೂಪಾಯಿ ವಂಚನೆಯ ಹಣವನ್ನು ಪಾವತಿಸಿದೆ ಎಂದು ಇಡಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಈಗ ಹೈಕೋರ್ಟ್ ಎಫ್ಐಆರ್ ದಾಖಲಿಸಲು ಆದೇಶಿಸಿದೆ ಎಂದು ತಿಳಿದು ಬಂದಿದೆ.














