ಮಂಗಳೂರು : ಭಾರತೀಯ ಕರಾವಳಿ ಕಾವಲು ಪಡೆ ಮೀನುಗಾರರೊಬ್ಬರನ್ನು ರಕ್ಷಿಸಿ ಪ್ರಶಂಸೆಗೆ ಪಾತ್ರವಾಗಿದೆ. ನವೆಂಬರ್ 1, 2026 ರಂದು ಮಂಗಳೂರಿನಿಂದ ಸುಮಾರು 54 ನಾಟಿಕಲ್ ಮೈಲು (100 ಕಿ.ಮೀ.) ದೂರದಲ್ಲಿ ಕಾರ್ಯಾಚರಣೆಯಲ್ಲಿದ್ದ ಮೀನುಗಾರಿಕಾ ದೋಣಿ IFB ಶಿವ ಸಾಗರ್ ನಿಂದ VHF ಮೂಲಕ ತುರ್ತುಕರೆ ಬಂದಿದೆ. ಮೀನುಗಾರಿಕಾ ಬಲೆ ಎಳೆಯುವಾಗ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದಿದ್ದು, ನಂತರ ದೋಣಿಯವರೇ ಅವರನ್ನು ಮೇಲಕ್ಕೆತ್ತಿದ್ದರು. ಆದರೆ ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿತ್ತು ಎಂದು ತಿಳಿದು ಬಂದಿದೆ.
ತುರ್ತು ಕರೆ ಸ್ವೀಕರಿಸಿದ ತಕ್ಷಣ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರ-3 (CGDHQ-3) ಅತ್ಯಂತ ಕಾರ್ಯತತ್ಪರತೆಯಿಂದ ಪ್ರತಿಕ್ರಿಯಿಸಿತು. ತಕ್ಷಣವೇ ICGS C-448 ದೋಣಿಯನ್ನು ನಿಯೋಜಿಸಲಾಯಿತು. ರಾತ್ರಿಯ ಕತ್ತಲಲ್ಲಿಯೇ ಮೀನುಗಾರಿಕಾ ದೋಣಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಲಾಯಿತು. ದಿಕ್ಕು ತೋಚದೆ ಬಳಲಿದ್ದ ಮೀನುಗಾರನನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ, ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ನವ ಮಂಗಳೂರು ಬಂದರು (NMPA) ಜೆಟ್ಟಿಗೆ ಕರೆತರಲಾಯಿತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಮೂಲಗಳು ವರದಿ ಮಾಡಿವೆ.













