ಪೊಳಲಿ : ಇಲ್ಲಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಫಲ್ಗುಣಿ ನದಿ ತಟದ ಪಡ್ಯಾಪುವಿನ 15 ಎಕರೆ ಪ್ರದೇಶದಲ್ಲಿ ₹1.50 ಕೋಟಿ ವೆಚ್ಚದಲ್ಲಿ ಗೋಶಾಲೆ ನಿರ್ಮಾಣಗೊಳ್ಳಲಿದ್ದು, ಕಾಮಗಾರಿಯ ಭೂಮಿಪೂಜೆಯನ್ನು ಶೀಘ್ರದಲ್ಲೇ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಗೋಶಾಲೆಯ ಕಾಮಗಾರಿಯ ನೀಲನಕ್ಷೆಯನ್ನು ಪರಿಶೀಲಿಸಿ, ನಿರ್ಮಾಣ ಕಾರ್ಯದ ಮುಂದಿನ ಹಂತಗಳ ಕುರಿತು ಚರ್ಚಿಸಲಾಯಿತು.
ಯೋಜನೆಯಡಿ ಗೋಶಾಲೆಯ ಜೊತೆಗೆ ಸ್ನಾನಘಟ್ಟ, ಗೋಶಾಲೆಯ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಹಾಗೂ ಗೋದಾಮು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಪ್ಪಂದವೂ ಮುಗಿದಿದೆ. ಗುತ್ತಿಗೆದಾರರಿಗೆ ಕಾಮಗಾರಿ ಆರಂಭಿಸಲು ವರ್ಕ್ ಆರ್ಡರ್ ನೀಡಲಾಗಿದೆ. ಸಭೆಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು,ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್, ಇಂಜಿನಿಯರ್ ಲಕ್ಷ್ಮಣ್ ಪೂಜಾರಿ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.














