ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ರೂಪಿಸಲಾಗಿದ್ದ ‘ಸ್ಟಿಂಗ್ ಕಾರ್ಯಾಚರಣೆ’ಯ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಪಕ್ಷದ ‘ಮಹಾನಾಯಕ’ನ ನೇರ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾವೆಲ್ಲಾ ಕ್ಯಾಸೆಟ್‌ಗಳನ್ನು ನವದೆಹಲಿಗೆ ಕೊಂಡೊಯ್ಯಲಾಗಿತ್ತು? ಯಾರಿಗೆ ಬ್ಲ್ಯಾಕ್‌ಮೇಲ್ ಮಾಡಲಾಗಿತ್ತು? ಯಾರ್ಯಾರ ವಿಡಿಯೋಗಳನ್ನು ಇಟ್ಟುಕೊಂಡು ಹೆದರಿಸಲಾಗಿದೆ ಎಂಬ ಸತ್ಯ ಶೀಘ್ರವೇ ಬಯಲಾಗಬೇಕಿದೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ಈ ಇಡೀ ಷಡ್ಯಂತ್ರದಲ್ಲಿ ರಾಕೇಶ್ ಶೆಟ್ಟಿ, ಕೃಪಾ ಆಳ್ವ ಹಾಗೂ ಬಾಗೇಪಲ್ಲಿ ಪ್ರಶಾಂತ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
“ಸ್ಟಿಂಗ್ ಸಂಚುಕೋರ ರಾಕೇಶ್ ಶೆಟ್ಟಿ ಮತ್ತು ಆತನ ಸಹಚರ ದಿನಬೆಳಗಾದರೆ ಮುಖ್ಯಮಂತ್ರಿ ಮನೆಯಲ್ಲೇ ಇರುತ್ತಾರೆ. ಇಬ್ಬರೂ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿದ್ದಾರೆ. ಸಿಎಂ ಕಚೇರಿ, ನಿವಾಸ ಎಲ್ಲೆಲ್ಲೂ ಓಡಾಡಿಕೊಂಡಿರುವ ಇವರು, ಡಿಸಿಪಿ ಕಚೇರಿಯಲ್ಲೂ ಕಾಲ್ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾರೆ. ಮುಖ್ಯಮಂತ್ರಿಯ ರಕ್ಷಣೆ ಇಲ್ಲದೆ ಇಷ್ಟೆಲ್ಲಾ ದರ್ಬಾರ್ ನಡೆಸಲು ಸಾಧ್ಯವೇ?” ಎಂದು ಕುಮಾರಸ್ವಾಮಿ ನೇರ ವಾಗ್ದಾಳಿ ನಡೆಸಿದ್ದಾರೆ. ರೌಡಿ ಶೀಟರ್ ಬಾಗೇಪಲ್ಲಿ ಪ್ರಶಾಂತ್ ಜತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ನಿಂತಿರುವ ಫೋಟೊವನ್ನು ಬಿಡುಗಡೆ ಮಾಡಿದ ಹೆಚ್‌ಡಿಕೆ, ಪೊಲೀಸರು ಹಾಗೂ ರಾಜಕಾರಣಿಗಳಿಂದ ಹಣ ವಸೂಲಿ ಮಾಡುವ ದಂಧೆಗೆ ಹೈಕಮಾಂಡ್ ಸಾಥ್ ನೀಡಿದೆ ಎಂದಿದ್ದಾರೆ.
“ಕಾಲೇಜು ದಿನಗಳಲ್ಲೇ ವಿಸಿಆರ್ ತೋರಿಸಿ ಹಣ ಮಾಡುತ್ತಿದ್ದ ಹಳೇ ಚಾಳಿಯನ್ನು ಕಾಂಗ್ರೆಸ್‌ನ ಮಹಾನಾಯಕ ಇಂದಿಗೂ ಮುಂದುವರಿಸಿದ್ದಾನೆ. ಇವನಿಂದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೂ ಅಪಾಯವಿದೆ; ಅವರ ವಿರುದ್ಧವೂ ಸ್ಟಿಂಗ್ ಮಾಡಿಸಬಹುದು, ಎಚ್ಚರದಿಂದಿರಲಿ” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯ ಹಾಗೂ ಡಾ. ಜಿ. ಪರಮೇಶ್ವರ್ ಅವರ ಸಿ.ಡಿ.ಗಳೂ ಸೋರಿಕೆಯಾಗುವ ಸಾಧ್ಯತೆಯಿದ್ದು, ಆಂತರಿಕ ತಿಕ್ಕಾಟದಲ್ಲೇ ಈ ಸರ್ಕಾರ ಶೀಘ್ರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.














