ಅಪ್ರಾಪ್ತ ಬಾಲಕಿಯೋರ್ವಳ ಮನೆಗೆ ಬಂದು ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆಗೆ ಸಂಬಂಧಿಸಿದಂತೆ, ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ. ಕ್ರ: 24/2019, ಕಲಂ : 376(2) (n) ಮತ್ತು 376(3), 506 IPC ಮತ್ತು ಕಲಂ : 5(j) (ii) L, 6 POCSO ACT -12 ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿದ್ದ ಆಗಿನ ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗೇಶ್. ಕೆ ರವರು ಪ್ರಕರಣದ ವಿಚಾರಣೆ ನಡೆಸಿ ಕಡಬ ನೂಜಿಬಾಳ್ತಿಲ ಆರೋಪಿ ಸದ್ದಾಂ (34) ಎಂಬಾತನ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.
ಮಾನ್ಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು (ಕಾರ್ಯ ನಿರ್ವಹಣೆ -ಪುತ್ತೂರು) ಇಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿ ರವರು ಆರೋಪಿತನ ವಿರುದ್ದದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಪೋಕ್ಸೋ ಕಾಯ್ದೆಯ ಸೆಕ್ಷನ್ 5(l) ಮತ್ತು 5 (j)(ii) ನೊಂದಿಗೆ ಓದಲಾದ ಸೆಕ್ಷನ್ 6 ರ ಅಡಿಯಲ್ಲಿ ಇಪ್ಪತ್ತು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 50,000/- ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ, ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಐ.ಪಿ.ಸಿ (IPC) ಯ ಸೆಕ್ಷನ್ 506 ರ ಅಡಿಯಲ್ಲಿ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 25,000/- ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ (ಸದ್ರಿ ಶಿಕ್ಷೆಗಳು ಏಕಕಾಲದಲ್ಲಿ (Concurrently) ಜಾರಿಯಲ್ಲಿರುತ್ತವೆ.
ಸದ್ರಿ ಆರೋಪಿಯು ಕಡಬ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ಆತನ ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:59 /2011, ಅ.ಕ್ರ:62/20, ಅ.ಕ್ರ:27/21, ಅ.ಕ್ರ:105/21 ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:101/2022 ದಾಖಲಾಗಿರುತ್ತದೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಪುಷ್ಪರಾಜ್ ಅಡoತ್ಯಾಯರವರು ಸಮರ್ಥ ವಾದಮಂಡನೆ ನಡೆಸಿರುತ್ತಾರೆ.















