ಈ ಬಾರಿ ಕನ್ನಡ ರಾಜ್ಯೋತ್ಸವ ಭಾನುವಾರ ಬಂದರೂ ಅಚರಣೆಯನ್ನು ಮುಂದೂಡುವಂತಿಲ್ಲ. ರಾಜ್ಯದ ಎಲ್ಲ ಸರಕಾರಿ, ಅನಿದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನ.1 ರಂದೇ ಕಡ್ಡಾಯವಾಗಿ ರಾಜ್ಯೋತ್ಸವ ಆಚರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ರಜಾದಿನ ಎಂಬ ಕಾರಣಕ್ಕೆ ರಾಜ್ಯೋತ್ಸವವನ್ನು ಬೇರೆ ದಿನಕ್ಕೆ ಮುಂದೂಡದೆ, ನಿಗದಿತ ದಿನದಂದೇ ಗೌರವಪೂರ್ವಕವಾಗಿ ಆಚರಿದಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ವಿಕಾಸ್ ಕಿಶೋರ್ ಸುರಾಳ್ಕರ್ ಸುತ್ತೋಲೆ ಹೊರಡಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.
ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಇಲಾಕೆಯ ಅಧಿಕಾರಿಗಳು ಹಾಗೂ ಶಾಲೆಗಳ ಮುಖ್ಯ ಶಿಕ್ಷಕರಿಗೆ ನಿರ್ದೇಶನ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳು, ನಾಡ ಹಬ್ಬವಾದ ಕರ್ನಾಟಕ ರಾಜ್ಯೋತ್ಸವ ಹಾಗೂ ಇತರ ಪ್ರಮುಖ ಜಯಂತಿಗಳನ್ನು ಆಯಾ ದಿನದಂದೇ ಗೌರವಯುತವಾಗಿ ಆಚರಿಸಬೇಕೆಂದು ಈ ಹಿಂದೆಯೇ ಇಲಾಖೆಯ ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿತ್ತು. ಇದೀಗ ಅದನ್ನು ಪುನರುಚ್ಚರಿಸಿರುವ ಇಲಾಖೆ, ಪ್ರಸಕ್ತ ಸಾಲಿನ ರಾಜ್ಯೋತ್ಸವವನ್ನು ನ.1ರಂದೇ ಸಡಗರದಿಂದ ಆಚರಿಸುವಂತೆ ಸ್ಪಷ್ಟಪಡಿಸಿದೆ. ಹೀಗಾಗಿ, ಭಾನುವಾರದ ರಜೆಯ ನಡುವೆಯೂ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯಲಿವೆ.














