ಕರ್ನಾಟಕದ ಶಾಸಕರ ವೈದ್ಯಕೀಯ ಖರ್ಚು ಬರೋಬ್ಬರಿ ₹7.40 ಕೋಟಿ!! ಹಾಗಾದ್ರೆ ಯಾವ ಶಾಸಕನೂ ಆರೋಗ್ಯವಾಗಿಲ್ವಾ?? ಏನಿದು ಹೊಸ ಲೆಕ್ಕ ಅಂತೀರಾ? ತಪ್ಪದೇ ಈ ಸ್ಟೋರಿ ಓದಿ..

ಕರ್ನಾಟಕ ರಾಜ್ಯದ ಶಾಸಕರು ಮತ್ತು ಅವರ ಕುಟುಂಬ ಸದಸ್ಯರ ಚಿಕಿತ್ಸೆಗೆ ಸರ್ಕಾರದಿಂದ ನೀಡಲಾಗುತ್ತಿರುವ ವೈದ್ಯಕೀಯ ವೆಚ್ಚ ಮರುಪಾವತಿ ಇದೀಗ ಚರ್ಚೆಗೆ ಕಾರಣವಾಗಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 69 ಮಂದಿ ಶಾಸಕರು ಹಾಗೂ ಅವರ ಕುಟುಂಬದವರಿಗೆ ಒಟ್ಟು ₹7.40 ಕೋಟಿ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲಾಗಿದೆ ಎಂಬ ಮಾಹಿತಿ ಆರ್‌ಟಿಐ ಮೂಲಕ ಬಹಿರಂಗವಾಗಿದೆ.

Advertisement

ಸಾಮಾಜಿಕ ಕಾರ್ಯಕರ್ತ ಎಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ವಿಧಾನಸಭೆ ಸಚಿವಾಲಯ ನೀಡಿರುವ ಉತ್ತರದಲ್ಲಿ ಈ ವಿವರಗಳಿವೆ. 2023ರ ಮೇ 20ರಿಂದ 2026ರ ಸೆಪ್ಟೆಂಬರ್ 30ರವರೆಗೆ ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಪಡೆದಿರುವ ವೈದ್ಯಕೀಯ ವೆಚ್ಚದ ಮರುಪಾವತಿ ಕುರಿತು ಸಚಿವಾಲಯ ಮಾಹಿತಿ ನೀಡಿದೆ.

Advertisement
Advertisement

ಈ ಅವಧಿಯಲ್ಲಿ ಬೇಲೂರು ಶಾಸಕ ಎಚ್.ಕೆ. ಸುರೇಶ್ ಹಾಗೂ ಅವರ ಕುಟುಂಬಕ್ಕೆ ಅತಿ ಹೆಚ್ಚು ಮೊತ್ತ ಮರುಪಾವತಿಯಾಗಿದ್ದು, ಒಟ್ಟು ₹98.78 ಲಕ್ಷ ನೀಡಲಾಗಿದೆ. ನಂತರ ಕೆ. ಹರೀಶ್‌ಗೌಡ ಹಾಗೂ ಕುಟುಂಬಕ್ಕೆ ₹85.91 ಲಕ್ಷ ಮತ್ತು ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಹಾಗೂ ಕುಟುಂಬಕ್ಕೆ ₹85.22 ಲಕ್ಷ ಮರುಪಾವತಿ ಮಾಡಲಾಗಿದೆ. ಇದೇ ವೇಳೆ ನಿಖಿಲ್ ಉಮೇಶ್ ಕತ್ತಿ ಹಾಗೂ ಅವರ ಕುಟುಂಬ ಪಡೆದಿರುವ ವೈದ್ಯಕೀಯ ವೆಚ್ಚ ಮರುಪಾವತಿ ಕೇವಲ ₹2,349 ಆಗಿದೆ. ಅಂದರೆ, ಶಾಸಕರು ಮತ್ತು ಅವರ ಕುಟುಂಬದವರ ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದಿದೆ. ಇನ್ನು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ₹69.78 ಲಕ್ಷ ವೈದ್ಯಕೀಯ ವೆಚ್ಚ ಮರುಪಾವತಿ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ₹10.45 ಲಕ್ಷ, ಎಸ್. ಸುರೇಶ್ ಕುಮಾರ್ ಅವರಿಗೆ ₹22.26 ಲಕ್ಷ, ಆರಗ ಜ್ಞಾನೇಂದ್ರ ಅವರಿಗೆ ₹10.21 ಲಕ್ಷ, ಲಕ್ಷ್ಮಣ ಸವದಿ ಅವರಿಗೆ ₹4.86 ಲಕ್ಷ, ಕೆ. ಗೋಪಾಲಯ್ಯ ಅವರಿಗೆ ₹21.05 ಲಕ್ಷ, ಎಚ್.ಡಿ. ರೇವಣ್ಣ ಅವರಿಗೆ ₹13.02 ಲಕ್ಷ ಹಾಗೂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ₹4.58 ಲಕ್ಷ ಮರುಪಾವತಿ ನೀಡಲಾಗಿದೆ.

ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯುವುದು ನಿಯಮದ ವ್ಯಾಪ್ತಿಯಲ್ಲೇ ಇದೆ. ಈ ಸೌಲಭ್ಯಕ್ಕೆ ನಿಗದಿತ ಮಿತಿ ಇಲ್ಲ ಎಂದು ಎಚ್.ಎಂ. ವೆಂಕಟೇಶ್ ಹೇಳಿದ್ದಾರೆ. ಆದರೆ ಶಾಸಕರು ಮತ್ತು ಅವರ ಕುಟುಂಬದವರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ಚಿಕಿತ್ಸಾ ವೆಚ್ಚ ಭರಿಸುವ ವ್ಯವಸ್ಥೆಯ ಬಗ್ಗೆ ಮರುಚಿಂತನೆ ಅಗತ್ಯವಿದೆ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಶಾಸಕರು ಚುನಾವಣಾ ಅಫಿಡವಿಟ್‌ಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರ ವೈದ್ಯಕೀಯ ವೆಚ್ಚವನ್ನೂ ಸರ್ಕಾರವೇ ಭರಿಸುವ ಬದಲು, ಶಾಸಕರಿಗೆ ಗ್ರೂಪ್ ಆರೋಗ್ಯ ವಿಮೆ ವ್ಯವಸ್ಥೆ ಕಲ್ಪಿಸುವುದು ಸೂಕ್ತ ಎಂದು ವೆಂಕಟೇಶ್ ಸಲಹೆ ನೀಡಿದ್ದಾರೆ.

ಒಟ್ಟಿನಲ್ಲಿ, 69 ಶಾಸಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಮೂರು ವರ್ಷದಲ್ಲಿ ₹7.40 ಕೋಟಿ ವೈದ್ಯಕೀಯ ವೆಚ್ಚ ಮರುಪಾವತಿಯಾಗಿರುವ ಅಂಕಿ-ಅಂಶಗಳು ಸಾರ್ವಜನಿಕ ಹಣದ ಬಳಕೆ ಮತ್ತು ಶಾಸಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ ಎಂದು ಸಾಮಾಜಿಕ ಜಾಲತಾಣದ ವರದಿಗಳು ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page