ಪುತ್ತೂರು : ಅಶೋಕ್ ಕುಮಾರ್ ರೈ ಅವರು ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಶಾಸಕರಾಗಿ ಬಂದು ಎಲ್ಲಾ ರೀತಿಯ ಅಭಿವೃದ್ಧಿಗೆ ಚಾಲನೆಯನ್ನು ನೀಡಿದ್ದಾರೆ. ಇವತ್ತಿನ ಇಡೀ ಜಗತ್ತಿನಲ್ಲಿ ಚರ್ಚೆಯಾಗುತ್ತಿರುವ ವಿಚಾರ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಅಭಿವೃದ್ಧಿಯ ವಿಚಾರ ಮತ್ತು ಪುತ್ತೂರಿಗೆ ಮೆಡಿಕಲ್ ಕಾಲೇಜು ಬಂದಿರುವುದು ಎಂದು ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಪುತ್ತೂರು ನಗರಸಭಾ ವ್ಯಾಪ್ತಿಯ ಮಹಾಲಿಂಗೇಶ್ವರ ದೇವಸ್ಥಾನದ ಬದಿಯಿಂದ ಮುಖ್ಯ ರಸ್ತೆಯ ಮೂಲಕ ಮಡ್ಯಾಲಕಟ್ಟೆ ರೈಲ್ವೇ ಸ್ಟೇಷನ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3 ಕೋಟಿ ರೂ. ಅನುದಾನದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಶಿಲಾನ್ಯಾಸ ನೆರವೇರಿಸಿದ ಸಂದರ್ಭದಲ್ಲಿ ಹೇಮನಾಥ ಶೆಟ್ಟಿ ಮಾತನಾಡಿದರು.
ಅಶೋಕ್ ಕುಮಾರ್ ರೈ ಅವರು ರಾಜ್ಯದ ನಂಬರ್ 1 ಶಾಸಕರು ಎಂದು ಹೇಳಬಹುದು. ಒಬ್ಬ ಶಾಸಕರಾಗಿ ಇಷ್ಟು ಕೆಲಸ ಮಾಡಲು ದೇವರು ಅವರಿಗೆ ಶಕ್ತಿಯನ್ನು ಕೊಟ್ಟಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಮೀನು ಇದ್ದರೂ ಕೂಡ ಯಾರೂ ಕೂಡಾ ಇಂತಹ ಯೋಜನೆಗಳನ್ನು ಮಾಡಲಾಗಿಲ್ಲ. ಅಶೋಕ್ ಕುಮಾರ್ ರೈ ಅವರು ನೂತನ ಆಡಳಿತ ಸಮಿತಿಯ ಜೊತೆಯಾಗಿಟ್ಟುಕೊಂಡು ಸಮಗ್ರವಾಗಿ ಜಾಗ, ಜಮೀನುಗಳು, ದೇವಾಸ್ಥಾನಕ್ಕೆ ಸಂಬಂಧಿಸಿದನ್ನು, ದೇವಸ್ಥಾನವನ್ನು ಬೇಳೆಸುವುದಲ್ಲದೇ, ಅದರ ಜೊತೆಗೆ ಬ್ರಹ್ಮಕಲಶೋತ್ಸವ ಆಗುವಾಗ ಸುಮಾರು 50-60ಕೋಟಿ ರೂಪಾಯಿಗಳ ಯೋಜನೆಗಳನ್ನು ತರುವಂತಹ ವಿಚಾರದ ಜೊತೆಗೆ ರಸ್ತೆಯ ಅಭಿವೃದ್ಧಿಯ ವಿಚಾರಗಳಲ್ಲಿ ಗೊಂದಲಗಳ ಬಗ್ಗೆ ಕೆಲವರು ಮಾತಾನಾಡುತ್ತಾರೆ. ಈ ಮಾತಾನಾಡುವವರಿಗೆ ಹುಚ್ಚು ಪ್ರಾರಂಭವಾಗಿದೆ. ಇಂತಹ ಹುಚ್ಚರ ಮಾತಿನಿಂದಲೇ ಶಾಸಕರು ಜಾಗೃತವಾಗಿ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ಯಾವುದೇ ಹಿಂದೂ ಸಮಾಜ ಅಥವಾ ಯಾವೂದೇ ಹಿಂದುಗಳು ಇದರ ಜೊತೆ ಇಲ್ಲ. ದೇವರ ಕೆಲಸಕ್ಕೆ ಅಡ್ಡಿಪಡಿಸುವಂತವರಿಗೆ ಉತ್ತರ ಕೊಡಬೇಕಾಗಿಲ್ಲ, ಬದಲಾಗಿ ಎಲ್ಲವನ್ನು ದೇವರು ನೋಡಿಕೊಳ್ಳುತ್ತಾರೆ. ಅದರ ಜೊತೆಗೆ ದೇವಸ್ಥಾನ ಸಂರಕ್ಷಣಾ ಸಮಿತಿ ಎಂದು ಕೆಲವರು ಹೇಳುತ್ತಾರೆ, ಆದರೆ ಇದು ಸಂರಕ್ಷಣೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಆ ಹೆಸರನ್ನು ನೀವು ಬದಲಾಯಿಸಿಕೊಂಡು ಮುಂದೆ ಹೋಗುವುದು ಒಳ್ಳೆಯದು. ಇಡೀ ಹಿಂದೂ ಸಮಾಜ ಅಥವಾ ಇಡೀ ಸಮಸ್ತ ಜನಾಂಗ ಇಂತಹ ಒಂದು ಒಳ್ಳೆ ಕೆಲಸವನ್ನ ಮಾಡುತ್ತಿದೆ. ಅದರ ಜೊತೆಗೆ ಸೇರಿಕೊಳ್ಳಿ. ನಿಮ್ಮ ಹುಚ್ಚುತನವನ್ನ ಬಿಟ್ಟುಬಿಡಿ, ಇದು ಮಹಾಲಿಂಗೇಶ್ವರ ದೇವರಿಗೆ ಪ್ರಿಯವಾಗುವುದಿಲ್ಲ. ಅಶೋಕ್ ರೈ ಅವರಿಗೆ ದೇವರ ಅನುಗ್ರಹ ಕೊಡಲಿ ಶಕ್ತಿಯನ್ನು ಕೊಡಲಿ, ಅವರ ಜೊತೆಗೆ ನಾವು ಯಾವಾಗಲೂ ಸೇರಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.














