ಕಣ್ಣೂರು : ಕೇರಳದ ಪ್ರತಿಷ್ಠಿತ ‘ತಿರುಓಣಂ ಬಂಪರ್ ಲಾಟರಿ’ಯ ಭಾರಿ ಮೊತ್ತದ 30 ಕೋಟಿ ರೂಪಾಯಿಗಳ ಪ್ರಥಮ ಬಹುಮಾನದ ಫಲಿತಾಂಶ ಪ್ರಕಟವಾಗಿ ಎರಡು ದಿನಗಳೇ ಕಳೆದಿದ್ದರೂ, ಆ ಅದೃಷ್ಟಶಾಲಿ ವ್ಯಕ್ತಿ ಯಾರೆಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಲಾಟರಿ ಇಲಾಖೆಯ ಪ್ರಕಾರ, 30 ಕೋಟಿ ರೂ. ಗೆದ್ದ ಜಾಕ್‌ಪಾಟ್ ಟಿಕೆಟ್ (TL 360615) ಕಣ್ಣೂರು ಜಿಲ್ಲೆಯ ಚಕ್ಕರಕ್ಕಲ್‌ನಲ್ಲಿ ಮಾರಾಟವಾಗಿರುವುದು ಖಚಿತಪಟ್ಟಿದೆ. ಆದರೆ, ಕೋಟ್ಯಧಿಪತಿಯಾದ ಆ ವ್ಯಕ್ತಿ ಮಾತ್ರ ಇನ್ನೂ ಹಣದ ಕ್ಲೈಮ್‌ಗಾಗಿ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ.
ಅದೃಷ್ಟದ ಟಿಕೆಟ್ ಅನ್ನು ಚಕ್ಕರಕ್ಕಲ್ ರಿಜಿಸ್ಟ್ರಾರ್ ಕಚೇರಿ ಬಳಿಯ ‘ಮುತ್ತು ಲಾಟರಿ ಏಜೆನ್ಸಿ’ಯ ಉಪ ಏಜೆಂಟ್ ಅನೀಶ್ ಮಾರಾಟ ಮಾಡಿದ್ದಾರೆ. ಕಳೆದ 18 ವರ್ಷಗಳಿಂದ ಈ ಉದ್ಯಮದಲ್ಲಿರುವ ಅನೀಶ್ ಅವರಿಗೆ ಇದು ಎರಡನೇ ಬಾರಿಗೆ ಒಲಿದ ಬಂಪರ್ ಅದೃಷ್ಟ! ಈ ಹಿಂದೆ ಕ್ರಿಸ್ಮಸ್-ಹೊಸ ವರ್ಷದ ಬಂಪರ್ ಲಾಟರಿಯಲ್ಲೂ ಇವರ ಏಜೆನ್ಸಿಯ ಟಿಕೆಟ್‌ಗೇ ಮೊದಲ ಬಹುಮಾನ ಸಿಕ್ಕಿತ್ತು.














