ಬ್ರೆಸಿಲಿಯಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ಬಹಿರಂಗವಾಗಿ ಟೀಕಿಸುತ್ತ ಬಂದಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲೂಲಾಡಾ ಸಿಲ್ವಾ ಅವರು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಲಪಂಥೀಯ ಸೆನೆಟರ್ ಹಾಗೂ ಮಾಜಿ ಅಧ್ಯಕ್ಷ ಜೈರ್ ಬೊಲ್ಸನಾರೊ ಅವರ ಪುತ್ರ ಫ್ಲಾವಿಯೊ ಬೊಲ್ಸನಾರೊ ಅವರನ್ನು ಸೋಲಿಸುವ ಮೂಲಕ ಲೂಲಾ ಮಹತ್ವದ ರಾಜಕೀಯ ಪುನರಾಗಮನ ಮಾಡಿದ್ದಾರೆ ಎಂದು ವರದಿಯಾಗಿದೆ.
ಬ್ರೆಜಿಲ್ನ ಸುಪೀರಿಯರ್ ಎಲೆಕ್ಟೋರಲ್ ಕೋರ್ಟ್ ಪ್ರಕಾರ, ಲೂಲಾ ಅವರು ಚಲಾವಣೆಯಾದ ಮಾನ್ಯ ಮತಗಳಲ್ಲಿ ಶೇ. 51.8ರಷ್ಟು ಮತಗಳನ್ನು ಪಡೆದರೆ, ಫ್ಲಾವಿಯೊ ಬೊಲ್ಸನಾರೊ ಶೇ. 48.2ರಷ್ಟು ಮತಗಳನ್ನು ಗಳಿಸಿದ್ದಾರೆ. ಚುನಾವಣೆಯ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ಲೂಲಾ, ಅಂತಿಮ ಸುತ್ತಿನಲ್ಲಿ ಗೆಲುವು ಸಾಧಿಸಿ ಲ್ಯಾಟಿನ್ ಅಮೆರಿಕದ ಅತಿದೊಡ್ಡ ರಾಷ್ಟ್ರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಫಲಿತಾಂಶವು ಲ್ಯಾಟಿನ್ ಅಮೆರಿಕದಲ್ಲಿ ಅಮೆರಿಕದ ಹೆಚ್ಚುತ್ತಿರುವ ಪ್ರಭಾವವನ್ನು ವಿರೋಧಿಸುವವರಿಗೆ ಸಮಾಧಾನ ತಂದಿದೆ. ಈ ಪ್ರದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೆಕ್ಸಿಕೊ ಮತ್ತು ಬ್ರೆಜಿಲ್ ಎರಡೂ ದೇಶಗಳಲ್ಲಿ ಎಡಪಂಥೀಯ ಒಲವಿನ ನಾಯಕರು ಅಧಿಕಾರದಲ್ಲಿರುವಂತಾಗಿದೆ. ಗೆಲುವು ಖಚಿತವಾದ ಬಳಿಕ ಲೂಲಾ ಅವರು ಪತ್ನಿ ರೊಸೆಂಜೆಲಾ ಡಾ ಸಿಲ್ವಾ ಹಾಗೂ ಬೆಂಬಲಿಗರೊಂದಿಗೆ ಸಂಭ್ರಮಾಚರಿಸಿದರು. ಸಾವೊ ಪಾಲೊ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು ಎಂದು ಮೂಲಗಳು ತಿಳಿಸಿವೆ.














