ತರಬೇತಿ ಹಾರಾಟದ ವೇಳೆ ಎರಡು ಮಿಲಿಟರಿ ವಿಮಾನಗಳು ಆಕಾಶದಲ್ಲೇ ಡಿಕ್ಕಿಯಾಗಿ ಪತನಗೊಂಡಿದ್ದು, ನಾಲ್ವರು ಪೈಲಟ್ಗಳು ಮೃತಪಟ್ಟಿರುವುದಾಗಿ ಫಿಲಿಪ್ಪೀನ್ಸ್ ವಾಯುಪಡೆ ಮಾಧ್ಯಮಗಳಿಗೆ ಹೇಳಿದೆ.
ಮನಿಲಾದ ದಕ್ಷಿಣ ಭಾಗದಲ್ಲಿರುವ ಫರ್ನಾಂಡೊ ವಾಯು ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಎಸ್ಎಫ್-260 ಮಾದರಿಯ ಏಕ ಎಂಜಿನ್ ಪ್ರೊಪೆಲ್ಲರ್ ಹೊಂದಿರುವ ಎರಡು ವಿಮಾನಗಳು ಅಪಘಾತಕ್ಕೀಡಾಗಿವೆ. “ಎರಡೂ ವಿಮಾನಗಳು ವಾಯುನೆಲೆಯ ಆವರಣದೊಳಗೆ ಪತನಗೊಂಡಿವೆ. ಘಟನೆಯಲ್ಲಿ ನಾಲ್ವರು ಪೈಲಟ್ಗಳು ಮೃತಪಟ್ಟಿದ್ದು ಬೇರೆ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಫಿಲಿಪ್ಪೀನ್ಸ್ ವಾಯುಪಡೆಯ ವಕ್ತಾರ ಕರ್ನಲ್ ಆಲ್ವಿನ್ ಕಾಪಿಂಗ್ವಿಯನ್ ತಿಳಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆ ಆರಂಭಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಾಯು ಪಡೆಯ ಎಸ್ಎಫ್-260 ಮಾದರಿಯ ಎಲ್ಲ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಫಿಲಿಪೈನ್ಸ್ ಸೇನೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ವಿಮಾನ ಅಪಘಾತಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಮೇ ತಿಂಗಳಿನಲ್ಲಿಯೂ ಸಹ ಉತ್ತರ ಫಿಲಿಪೈನ್ಸ್ನ ಬೆಂಗುಯೆಟ್ ಪ್ರಾಂತ್ಯದಲ್ಲಿ ಇಂತಹುದೇ SF-260 ವಿಮಾನ ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು.














