ಭಾರತದ ತವರು ಸರಣಿಯ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಮುತ್ತೂಟ್ ಫಿನ್‌ಕಾರ್ಪ್ ಕೈಯಲ್ಲಿ!! ಬಿಸಿಸಿಐ ಘೋಷಣೆಯಷ್ಟೇ ಬಾಕಿ!!

ಮುಂಬೈ: ಮುಂದಿನ ಎರಡು ಸೀಸನ್‌ಗಳಿಗೆ ಭಾರತದ ಕ್ರಿಕೆಟ್‌ನ ತವರು ಸರಣಿಯ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳನ್ನು ಮುತ್ತೂಟ್ ಫಿನ್‌ಕಾರ್ಪ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ‘ಬ್ಲೂ ಮುತ್ತೂಟ್’ ಎಂದು ಕರೆಯಲ್ಪಡುವ ಈ ಶೀರ್ಷಿಕೆ ಪ್ರಾಯೋಜಕತ್ವದ ಒಪ್ಪಂದವನ್ನು, ಪ್ರತಿ ಪಂದ್ಯಕ್ಕೆ 4.85 ಕೋಟಿ ರೂಪಾಯಿಗಳ ಮೂಲ ದರದಲ್ಲಿ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಂತಿಮ ಬೆಲೆಯು ಮೂಲ ದರಕ್ಕಿಂತ ಕಡಿಮೆಯಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದಾಗ್ಯೂ, ಬಿಸಿಸಿಐ ಅಧಿಕೃತವಾಗಿ ಒಪ್ಪಂದವನ್ನು ಘೋಷಿಸಿದ ನಂತರವೇ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಈ ಹಕ್ಕುಗಳನ್ನು ಪಡೆಯಲು ಗಂಭೀರ ಆಸಕ್ತಿಯುಳ್ಳ ಬಿಡ್‌ದಾರರು ಇಲ್ಲದ ಕಾರಣ, ಹೊಸ ಶೀರ್ಷಿಕೆ ಪ್ರಾಯೋಜಕರ ಘೋಷಣೆಯಲ್ಲಿ ವಿಳಂಬವಾಗಿತ್ತು. ಈ ಆಸಕ್ತಿಯ ಕೊರತೆಗೆ ಹೆಚ್ಚಿನ ಮೂಲ ದರವೂ ಒಂದು ಕಾರಣವಾಗಿತ್ತು. ಇದುವರೆಗಿನ ಶೀರ್ಷಿಕೆ ಪ್ರಾಯೋಜಕರಾದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಪ್ರತಿ ಪಂದ್ಯಕ್ಕೆ 4.2 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿತ್ತು.

Advertisement

ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದ್ದರೆ, ಬಿಸಿಸಿಐನ ‘ಟೆಂಡ‌ರ್ ಆಹ್ವಾನ’ದಲ್ಲಿ ನಿಗದಿಪಡಿಸಿದ ಗಡುವು ದಿನಾಂಕವಾದ ಆಗಸ್ಟ್ 13 ರಂದೇ ಪ್ರಮುಖ ಪ್ರಾಯೋಜಕರನ್ನು ನಿರ್ಧರಿಸಲಾಗುತ್ತಿತ್ತು. ಆದರೆ, ಯಾವುದೇ ಬಿಡ್‌ದಾರರು ಮುಂದೆ ಬಾರದ ಕಾರಣ, ಬಿಸಿಸಿಐ ಆಸಕ್ತ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿತು; ವರದಿಯ ಪ್ರಕಾರ, ಗೂಗಲ್ ಜೆಮಿನಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಸ್ಪಿನ್ನಿ ಮತ್ತು ಎಸ್‌ಬಿಐ ಲೈಫ್ ಮುಂತಾದವುಗಳನ್ನು ಈ ನಿಟ್ಟಿನಲ್ಲಿ ಸಂಪರ್ಕಿಸಲಾಗಿತ್ತು.
ಕೊಚ್ಚಿ ಮೂಲದ ಮುತ್ತೂಟ್ ಸಂಸ್ಥೆಯ ಮುತ್ತೂಟ್ ಫಿನ್‌ಕಾರ್ಪ್ 2028ರ ಮಾರ್ಚ್ 31ರವರೆಗೆ ಭಾರತದಲ್ಲಿ ನಡೆಯಲಿರುವ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶೀಯ ಪಂದ್ಯಗಳ ಟೈಟಲ್ ರೈಟ್ಸ್ ಹೊಂದಿರಲಿದೆ. ಈ ಒಪ್ಪಂದವು ಸದರಿ ಅವಧಿಯಲ್ಲಿ ತವರಿನಲ್ಲಿ ನಡೆಯುವ ಸುಮಾರು 35 ಅಂತಾರಾಷ್ಟ್ರೀಯ ಪಂದ್ಯಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ 10 ಟೆಸ್ಟ್, 12 ಏಕದಿನ ಮತ್ತು 13 ಟಿ20 ಪಂದ್ಯಗಳು ಸೇರಿವೆ.
ಸೆ.27ರಂದು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯೊಂದಿಗೆ ಈ ಒಪ್ಪಂದ ಜಾರಿಗೆ ಬರಲಿದೆ. ವಿಶೇಷ ಎಂದರೆ ಮುತ್ತೂಟ್ ಗುಂಪಿನ ತವರಾದ ಕೇರಳದಲ್ಲಿಯೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯ ನಡೆಯಲಿದೆ ಎಂದು ಮೂಲ ವರದಿಗಳಿಂದ ತಿಳಿದು ಬಂದಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page