“ಶಾರ್ದೂಲವರವಾಹನಾ, ಕತ್ಯಾಯನಿ ಶುಭಂ ದದ್ಯಾದ್ದೇವಿ ದಾನವಘಾತಿನಿ”
ನಾಳೆ ನವರಾತ್ರಿಯ ಆರನೇ ದಿನ! ತಾಯಿ ಕಾತ್ಯಾಯಿನಿ ದೇವಿಯ ಆರಾಧನೆಯ ಶುಭದಿನ! ಹಳದಿ ಬಣ್ಣವೇ ನಾಳೆಗೆ ಮಂಗಳಕರ!!
ಕತ ದೇವರ್ಷಿಗಳ ವಂಶದಲ್ಲಿ ಬಂದ ಮಹರ್ಷಿ ಕಾತ್ಯಾಯನರು ದೇವಿಯನ್ನು ಮಗಳಾಗಿ ಪಡೆಯಲು ಕಠಿಣ ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿ ಆದಿಶಕ್ತಿಯು ಅವರ ಮಗಳಾಗಿ ಜನಿಸಿದಳು. ಮಹರ್ಷಿ ಕಾತ್ಯಾಯನರ ಮಗಳಾಗಿ ಜನಿಸಿದ ಕಾರಣದಿಂದ ಈ ದೇವಿಗೆ ‘ಕಾತ್ಯಾಯನಿ’ ಎಂಬ ಹೆಸರು ಬಂದಿತು. ಲೋಕದಲ್ಲಿ ಮಹಿಷಾಸುರ ಎಂಬ ರಾಕ್ಷಸನ ಕಾಟ ಹೆಚ್ಚಾದಾಗ, ಶಿವ, ವಿಷ್ಣು ಮತ್ತು ಬ್ರಹ್ಮ ಸೇರಿದಂತೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಒಗ್ಗೂಡಿಸಿ ದೇವಿಗೆ ದಿವ್ಯ ಆಯುಧಗಳನ್ನು ನೀಡಿದರು. ಸಿಂಹವಾಹಿನಿಯಾದ ಕಾತ್ಯಾಯಿನಿ ದೇವಿ ಉಗ್ರ ರೂಪಗೊಂಡು ಮಹಿಷಾಸುರನನ್ನು ಹಾಗೂ ಇತರ ರಾಕ್ಷಸರನ್ನು ಸಂಹಾರ ಮಾಡಿ ದೇವತೆಗಳನ್ನು ಮತ್ತು ಲೋಕವನ್ನು ಕಾಪಾಡಿದಳು.
ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸಿ. ಪೂಜಾ ವೇದಿಕೆಯ ಮೇಲೆ ಬಟ್ಟೆ ಹಾಸಿ ದೇವರ ವಿಗ್ರಹ ಅಥವಾ ಭಾವಚಿತ್ರವನ್ನು ಇರಿಸಬೇಕು. ನವರಾತ್ರಿಯ ಮೊದಲ ದಿನ ಸ್ಥಾಪಿಸಿದ ಕಲಶದ ಮುಂದೆ ಕುಳಿತು, ಭಕ್ತಿಯಿಂದ ಪೂಜೆಯ ಸಂಕಲ್ಪ ಮಾಡಬೇಕು. ದೇವಿಗೆ ಹೂವುಗಳು, ಅಕ್ಷತೆ, ರೋಲಿ ಮತ್ತು ಗಂಧವನ್ನು ಅರ್ಪಿಸಿ. ಧೂಪ ಮತ್ತು ದೀಪವನ್ನು ಬೆಳಗಿಸಬೇಕು. ದೇವಿಗೆ ಜೇನುತುಪ್ಪ ಅಥವಾ ಜೇನುತುಪ್ಪದಿಂದ ಮಾಡಿದ ಸಿಹಿತಿಂಡಿಯನ್ನು ವಿಶೇಷ ನೈವೇದ್ಯವಾಗಿ ಅರ್ಪಿಸಬೇಕು. ದೇವಿಯ ವಿಶೇಷ ಮಂತ್ರವನ್ನು 108 ಬಾರಿ ಪಠಿಸಿ. ಕರ್ಪೂರ ಹಚ್ಚಿ ಕಾತ್ಯಾಯಿನಿ ದೇವಿಗೆ ಹಾಗೂ ದುರ್ಗಾ ಮಾತೆಗೆ ಮಂಗಳಾರತಿ ಮಾಡಬೇಕು. ಕೌಟುಂಬಿಕ ಸುಖ-ಶಾಂತಿ ದೊರೆಯಲೆಂದು ಪ್ರಾರ್ಥಿಸಿ.














