ಬೆಂಗಳೂರು: 2003ರಲ್ಲಿ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ರಿಂಗ್ ರೋಡ್ ಶುಭಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶುಭಾ ಶಂಕರ್ ಮತ್ತು ಡಿ. ಅರುಣ್ ವರ್ಮಾಗೆ ಕ್ಷಮಾದಾನ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿಂದು ಚರ್ಚೆ ನಡೆದಿದ್ದು, ಅಪರಾಧಿಗಳಿಗೆ ಸಂಪುಟ ಶಾಕ್ ಕೊಟ್ಟಿದೆ. ಇಂದಿನ ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಿಂಗ್ ಶುಭಾಗೆ ಕ್ಷಮೆ ನೀಡಲು ಸಮ್ಮತಿಗೆ ಸಂಪುಟ ಹಿಂದೇಟು ಹಾಕಿದೆ. ಭಾವಿ ಪತಿ ಗಿರೀಶ್ ಕೊಲೆ ಕೇಸ್ನಲ್ಲಿ ಶುಭಾ ಶಂಕರನಾರಾಯಣ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಶಿಕ್ಷೆ ಅನುಭವಿಸುತ್ತಿರುವ ಶುಭಾ ಹಾಗೂ ಡಿ. ಅರುಣ್ ವರ್ಮಾ ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ಕೋರಿ ರಾಜ್ಯಪಾಲರ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಇಂದು ಚರ್ಚೆ ನಡೆದಿದ್ದು, ಸಚಿವ ಸಂಪುಟ ಕ್ಷಮಾದಾನವನ್ನು ತಿರಸ್ಕರಿಸಿದೆ.
ನವೆಂಬರ್ 30, 2003 ಕಾನೂನು ವಿದ್ಯಾರ್ಥಿನಿ ಶುಭಾ ಶಂಕರನಾರಾಯಣ್ ಅವರ ನಿಶ್ಚಿತಾರ್ಥ 27 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಬಿವಿ ಗಿರೀಶ್ ಜೊತೆ ನಡೆದಿತ್ತು. ಮದುವೆ ಮುಂದಿನ ವರ್ಷಕ್ಕೆ ನಿಗದಿ ಮಾಡಲಾಗಿತ್ತು. ಚೆನ್ನಾಗಿ ಓದಿ ಇಂಜಿನಿಯರ್ ಆಗಿದ್ದ ಗಿರೀಶ್, ಶುಭಾ ಜೊತೆ ಹಸೆಮಣೆ ಏರುವ ಕನಸು ಕಂಡು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಎರಡೂ ಕುಟುಂಬಗಳು ಇಬ್ಬರ ಮದುವೆ ನಿಶ್ಚಯವಾದ ಖುಷಿಯಲ್ಲಿತ್ತು. ಎಂಗೇಜ್ಮೆಂಟ್ ಆದ ಮೂರೇ ದಿನಕ್ಕೆ ಇಂಜಿನಿಯರ್ ಗಿರೀಶ್ ರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದ. ಡಿಸೆಂಬರ್ 3ರ ರಾತ್ರಿ ಗಿರೀಶ್ಗೆ ಕರೆ ಮಾಡಿದ್ದ ಶುಭಾ ತನ್ನನ್ನು ರಾತ್ರಿ ಹೊರಗೆ ಊಟಕ್ಕೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಳು. ಊಟದ ಬಳಿಕ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ್ದಳು. ಅದರಂತೆ ಗಿರೀಶ್ ಆಕೆಯನ್ನು ರಿಂಗ್ ರೋಡ್ನ ವೀಕ್ಷಣಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.
ಇಬ್ಬರೂ ವಿಮಾನಗಳ ಹಾರಾಟ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಗಿರೀಶ್ ಮೇಲೆ ದಾಳಿ ನಡೆದಿತ್ತು. ಆರೋಪಿಗಳು ಬೈಕ್ನ ಶಾಕ್ ಅಬ್ಸಾರ್ಬರ್ನಿಂದ ಗಿರೀಶ್ ತಲೆಗೆ ಹೊಡೆದಿದ್ದರು. ಗಂಭೀರವಾಗಿ ಗಾಯಗೊಂಡ ಗಿರೀಶ್ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಖಾಸಗಿ ಆಸ್ಪತ್ರೆಯಲ್ಲಿ ಗಿರೀಶ್ ಮೃತಪಟ್ಟಿದ್ದನು. ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಎ. ನಾನಯ್ಯ ಪ್ರಕರಣದ ತನಿಖೆ ನಡೆಸಿದ್ದರು. ಮೊಬೈಲ್ ಕರೆಗಳ ವಿವರಗಳನ್ನು (CDR) ಪರಿಶೀಲಿಸಿದಾಗ ಪೊಲೀಸರಿಗೆ ಪ್ರಮುಖ ಸುಳಿವು ಸಿಕ್ಕಿತ್ತು.
ಆ ಕಾಲದಲ್ಲಿ ಕರೆಗಳ ದಾಖಲೆಗಳನ್ನು ಬಳಸಿಕೊಂಡು ತನಿಖೆ ನಡೆಸಿದ್ದು ಮಹತ್ವದ ಬೆಳವಣಿಗೆಯಾಗಿತ್ತು. ತನಿಖೆಯ ನಂತರ ಶುಭಾ ಶಂಕರನಾರಾಯಣ, ಅರುಣ್ ವರ್ಮಾ ಮತ್ತು ಅವರ ಸಹಚರರಾದ ವೆಂಕಟೇಶ್ ಹಾಗೂ ದಿನೇಶ್ ಅವರನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆಯಲ್ಲಿ ನಾಲ್ವರು ಆರೋಪಿಗಳ ಪಾತ್ರವನ್ನು ನ್ಯಾಯಾಲಯ ಪರಿಶೀಲಿಸಿತ್ತು. ನಾಲ್ವರೂ ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಕೋರ್ಟ್ ತೀರ್ಪು ನೀಡಿತ್ತು. ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 2010ರಲ್ಲಿ ವಿಚಾರಣಾ ನ್ಯಾಯಾಲಯ ನಾಲ್ವರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿತ್ತು.
ಶುಭಾ ಮತ್ತು ಅರುಣ್ ನಡುವಿನ ಸಂಬಂಧ ಹಾಗೂ ಗಿರೀಶ್ ಕೊಲೆಗೆ ರೂಪಿಸಲಾಗಿದ್ದ ಸಂಚು ಪ್ರಕರಣದ ಪ್ರಮುಖ ಅಂಶಗಳಾಗಿದ್ದವು. ಬಳಿಕ ಆರೋಪಿಗಳು ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ವಿಚಾರಣೆ ಬಳಿಕ ಸೆಷನ್ ಕೋರ್ಟ್ ನ್ಯಾಯಾಲಯದ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಶುಭಾ 2012ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದಿದ್ದಳು. ನಂತರ ಇತರ ಆರೋಪಿಗಳೂ ಜಾಮೀನಿನ ಮೇಲೆ ಹೊರಬಂದಿದ್ದರು. ಜುಲೈ 2025ರಲ್ಲಿ ಸುಪ್ರೀಂ ಕೋರ್ಟ್ ನಾಲ್ವರು ಆರೋಪಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಈ ಮೂಲಕ ಕೆಳಹಂತದ ನ್ಯಾಯಾಲಯಗಳು ವಿಧಿಸಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.















