ಏಷ್ಯನ್ ಗೇಮ್ಸ್‌ನ ಕಬಡ್ಡಿಯಲ್ಲಿ ಭಾರತ ಚಿನ್ನ ಗೆದ್ದ ಬೆನ್ನಲ್ಲೇ ಅಳದಂಗಡಿ ಶ್ರೀ ಸತ್ಯದೇವತೆ ಕಲ್ಲುರ್ಟಿ ಕ್ಷೇತ್ರದ ಹೆಸರು ಮುನ್ನೆಲೆಗೆ ಬಂದಿದೆ. ಎರಡು ತಿಂಗಳ ಹಿಂದೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಪವನ್ ಶೆರಾವತ್, ಭಾರತ ಚಿನ್ನ ಗೆದ್ದರೆ ಮತ್ತೆ ಬಂದು ಹರಕೆ ತೀರಿಸುವುದಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಕಬಡ್ಡಿ ತಂಡದ ಉಪನಾಯಕ ಪವನ್ ಶೆರಾವತ್ ಎರಡು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಳದಂಗಡಿಯ ಶ್ರೀ ಸತ್ಯದೇವತೆ ಕಲ್ಲುರ್ಟಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಲ್ಲುರ್ಟಿ ತಾಯಿಯ ಬಳಿ ಪ್ರಾರ್ಥನೆ ಸಲ್ಲಿಸಿದ್ದ ಪವನ್ ಶೆರಾವತ್, ಭಾರತ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದರೆ ಮತ್ತೆ ಕಲ್ಲುರ್ಟಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದೀಗ ಭಾರತ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದೆ. ಜನತೆ ಇದೀಗ ಕಲ್ಲುರ್ಟಿ ದೈವದ ಮಹಿಮೆಯನ್ನು ಕೊಂಡಾಡುತ್ತಿದ್ದಾರೆ.














