ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಸಂಭ್ರಮಕ್ಕಿಂತ ವಿವಾದಗಳ ಕಾರಣಕ್ಕೆ ಹೆಚ್ಚು ಸುದ್ದಿಯಾಗಿದ್ದು, ಇದೀಗ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಅಸಮಾಧಾನ ಹೊರಹಾಕಿದ್ದಾರೆ. ದಸರಾ ಆಯೋಜನೆಯಲ್ಲಿ ಕಂಡುಬಂದ ಲೋಪಗಳು, ವಿವಿಧ ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ಕುರಿತು ನಾಲ್ಕು ಪುಟಗಳ ಸುದೀರ್ಘ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ದಸರಾ ಸಂಪ್ರದಾಯದ ಭಾಗವಾದ ಜಟ್ಟಿ ಕಾಳಗ ಸ್ಥಗಿತಗೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಪೊಲೀಸ್ ಇಲಾಖೆ ಮತ್ತು ಜಟ್ಟಿ ಸಮುದಾಯದ ನಡುವೆ ಸಮನ್ವಯದ ಕೊರತೆಯೇ ಸಮಸ್ಯೆಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದೆಯೂ 1970, 1980 ಮತ್ತು 2020ರಲ್ಲಿ ಜಟ್ಟಿ ಕಾಳಗ ಸ್ಥಗಿತಗೊಂಡಿದ್ದನ್ನು ಉಲ್ಲೇಖಿಸಿದ್ದಾರೆ. ವಿಜಯಯಾತ್ರೆ ನಿಗದಿತ ಮುಹೂರ್ತದಂತೆ ನಡೆದಿದ್ದು, ಸಮನ್ವಯದ ಕೊರತೆಗೆ ಕಾರಣರಾದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಚಿನ್ನದ ಅಂಬಾರಿ ತಮ್ಮ ಕುಟುಂಬದ ಖಾಸಗಿ ಆಸ್ತಿಯಾಗಿದ್ದು, ಅದರ ಭದ್ರತೆಗೆ ಸೂಕ್ತ ವ್ಯವಸ್ಥೆ ಮಾಡಬೇಕಿತ್ತು ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಪೊಲೀಸ್ ಆಯುಕ್ತರು ನೀಡಿದ್ದ ಭರವಸೆಯಂತೆ ವ್ಯವಸ್ಥೆ ಇರಲಿಲ್ಲ, ಅಂಬಾರಿ ಸುತ್ತ ಅನಧಿಕೃತ ವ್ಯಕ್ತಿಗಳು ಓಡಾಡಿ, ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರಿಂದ ಭದ್ರತೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವರಾತ್ರಿ ಆಚರಣೆಗಳ ವೇಳೆ ಖಾಸಗಿ ಸ್ಥಳದ ಅತಿಕ್ರಮಣ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಆಯುಧಪೂಜೆ ಮತ್ತು ವಿಜಯದಶಮಿಯ ಆಚರಣೆಗಳಿಗೆ ಅವಕಾಶ ನೀಡಬೇಕು ಎಂದೂ ತಿಳಿಸಿದ್ದಾರೆ. ಅಂಬಾರಿ ಹೊರುವ ಆನೆಯ ಆಯ್ಕೆ ಕುರಿತು ಕೊನೆಯ ಕ್ಷಣದವರೆಗೂ ಮಾಹಿತಿ ನೀಡಿರಲಿಲ್ಲ ಎಂದು ಅವರು ಹೇಳಿದ್ದಾರೆ. ದಶಕಗಳಿಂದ ನೀಡುತ್ತಿರುವ ಸಹಕಾರವನ್ನು ನಿರ್ಲಕ್ಷಿಸದೆ, ಮುಂದಿನ ವರ್ಷಗಳಲ್ಲಿ ತಮ್ಮ ಸಲಹೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.














