ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ಪ್ರತಿಭಟಿಸುತ್ತಿದ್ದ 500ಕ್ಕೂ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಮ್ ಆದ್ಮ ಪಕ್ಷ (ಎಎಪಿ) ನಾಯಕರಾದ ಸೌರಬ್ ಭಾರಧ್ವಜ್, ಸಂಜೀವ್ ಝಾ, ಅತಿಶಿ ಹಾಗೂ ಸಂಜಯ್ ಸಿಂಗ್ ಮತ್ತು ವಿದ್ಯಾರ್ಥಿ ಸಂಘಟನೆಗಳ ಹೋರಾಟಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಅಳಿಸಿರುವುದನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಾಜಕೀಯ ಪಕ್ಷಗಳು ಹಾಗೂ ಎಐಎಸ್‌ಎ, ಎಸ್‌ಎಫ್‌ಐ, ಎನ್‌ಎಸ್‌ಯುಐ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ಎಎಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ನಾರ್ತ್ ಅವೆನ್ಯೂ ಪ್ರದೇಶದಲ್ಲಿ ತಡೆದಿದ್ದಾರೆ. ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತದ್ದ ನನ್ನನ್ನು ಹಾಗೂ ಸಂಜಯ್ ಝಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಸೌರಭ್ ಭಾರಧ್ವಜ್ ‘ಎಕ್ಸ್’ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಜಂತರ್ ಮಂತರ್‌ಗೆ ತೆರಳುತ್ತಿದ್ದ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಗೆ ಸೇರಿದ ಸುಮಾರು 700 ಮಂದಿಯನ್ನು ತಡೆಯಲಾಗಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ. ಎಎಪಿ ನಾಯಕರು, ಎಐಎಸ್‌ಎ, ಎಸ್‌ಎಫ್ ಹಾಗೂ ಇನ್ನಿತರ ವಿದ್ಯಾರ್ಥಿ ಸಂಘಟನೆಗೆ ಸೇರಿದ ಸುಮಾರು 500 ಮಂದಿಯನ್ನು ಜಂತರ್ ಮಂತರ್ ಸಮೀಪ ವಶಕ್ಕೆ ಪಡೆಯಲಾಗಿದೆ ಎಂದು ಮತ್ತೊಂದು ಪೊಲೀಸ್ ಮೂಲ ತಿಳಿಸಿದೆ. ಪ್ರತಿಭಟನಾ ಹಾಗೂ ಸುತ್ತಮುತ್ತಲ ಸ್ಥಳದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಡಿವೈಎಫ್‌ಐ ಮತ್ತು ಎಸ್‌ಎಫ್‌ಐನ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಐಶೆ ಘೋಷ್ ಹೇಳಿದ್ದಾರೆ. ‘ರಾಜಧಾನಿಯಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ದೆಹಲಿ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಆದರೆ ಜ್ಞಾನೇಶ್ ಕುಮಾರ್ ಅವರಂತಹ ವ್ಯಕ್ತಿಯ ರಕ್ಷಣೆಯ ವಿಷಯ ಬಂದಾಗ, ಪೊಲೀಸರು ರಸ್ತೆಗೆ ಇಳಿಯುತ್ತಾರೆ’ ಎಂದು ಘೋಷ್ ಕಿಡಿ ಕಾರಿದ್ದಾರೆ.
ಎನ್‌ಎಸ್‌ಯುಐನ ಹಲವು ಕಾರ್ಯಕರ್ತರನ್ನು ಪ್ರತಿಭಟನಾ ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ. ಫಿರೋಜ್ ಶಾ ರಸ್ತೆಯಲ್ಲಿ ಹಲವು ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಹಾರಿ ಮುನ್ನುಗ್ಗುವ ದೃಶ್ಯಗಳೂ ಕಂಡು ಬಂದವು.














