ಪುತ್ತೂರು: ನಗರಸಭೆ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಸ್ಥಳಗಳಲ್ಲಿ ಈಗಾಗೇ ಅಳವಡಿಸಲಾಗಿರುವ ಅನಧಿಕೃತ ಬ್ಯಾನರ್, ಪ್ಲೆಕ್ಸ್ ಮತ್ತು ಧ್ವಜಪತಾಕೆಗಳನ್ನು ತೆರವುಗೊಳಿಸಲು ಪುತ್ತೂರು ನಗರಸಭೆ ಹಾಗೂ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕಾರ್ಯಾಚರಣೆ ಪ್ರಾರಂಭಿಸಿದೆ. ನಗರದ ಸೌಂದರ್ಯದ ಜಾಗೃತಿಯ ಜೊತೆಗೆ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಎದುರಾಗುವ ಅಪಾಯಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ನಿಯಮಾವಳಗಳ ಪ್ರಕಾರ ನಗರಸಭೆ ವ್ಯಾಪ್ತಿಯ ಒಳಗೆ ಯಾವುದೇ ಬ್ಯಾನರ್, ಪ್ಲೆಕ್ಸ್ ಅಥವಾ ಹೋರ್ಡಿಂಗ್ಸ್ ಅಳವಡಿಸುವ ಮುನ್ನ ನಗರಸಭೆಯಿಂದ ಪೂರ್ವಾನುಮತಿ ಹಾಗೂ ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯ. ಅನುಮತಿ ಇಲ್ಲದೆ ಬ್ಯಾನರ್ ಅಥವಾ ಪ್ಲೆಕ್ಸ್ ಅಳವಡಿಸುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ, ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ತಿಳಿಸಿದೆ.
ಜೊತೆಗೆ ವಿದ್ಯುತ್ ಕಂಬಗಳು, ಪ್ರಮುಖ ಜಂಕ್ಷನ್‌ಗಳು ಹಾಗೂ ವಾಹನ ಸವಾರರ ದೃಷ್ಟಿಗೆ ಅಡ್ಡಿಯಾಗುವ ಜಾಗದಲ್ಲಿ ಬ್ಯಾನರ್, ಪ್ಲೆಕ್ಸ್ ಅಳವಡಿಸುವುದನ್ನು ಈಗಾಗಲೇ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪುನರುಚ್ಚರಿಸಿದೆ.














