ದೇಶಾದ್ಯಂತ ಶನಿವಾರ ನಡೆಯುತ್ತಿರುವ ವಿವಿಧ ಜನಪರ ಹೋರಾಟಗಳು ಮತ್ತು ಪ್ರತಿಭಟನೆಗಳನ್ನು ಒಂದೇ ಸೂರಿನಡಿ ತರಲು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ‘ಸತ್ಯಾಗ್ರಹ’ ಎಂಬ ನೂತನ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಬಿಡುಗಡೆ ಮಾಡಿದ್ದಾರೆ. ದೇಶದ ಜನತೆಗೆ ತಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳ ವಿರುದ್ಧದ ಹೋರಾಟದ ಕಥೆಗಳು ಹಾಗೂ ಪ್ರತಿಭಟನೆಗಳ ವಿವರಗಳನ್ನು ಈ ಜಾಲತಾಣದಲ್ಲಿ ಮುಕ್ತವಾಗಿ ಹಂಚಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ರಾಹುಲ್ ಗಾಂಧಿ, ‘ದೇಶದ ಮೂಲೆ ಮೂಲೆಗಳಲ್ಲಿ ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ, ಆದರೆ ದುರದೃಷ್ಟವಶಾತ್ ಅವರು ಹೆಚ್ಚಾಗಿ ಒಬ್ಬಂಟಿಯಾಗಿದ್ದಾರೆ. ಮಹಿಳೆಯರು, ರೈತರು, ವಿದ್ಯಾರ್ಥಿಗಳು, ದಲಿತರು ಹಾಗೂ ಆದಿವಾಸಿಗಳು ಪ್ರತಿಯೊಂದು ಹೋರಾಟಕ್ಕೂ ತನ್ನದೇ ಆದ ಕಥೆಯಿದೆ. ಆದರೆ ಒಬ್ಬಂಟಿಯಾಗಿ ಎತ್ತುವ ಧ್ವನಿಯನ್ನು ವ್ಯವಸ್ಥೆಯು ಸುಲಭವಾಗಿ ಹತ್ತಿಕ್ಕುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಸ್ಮರಿಸಿದ ಅವರು, ಸತ್ಯದ ಪರವಾಗಿ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುವುದೇ ಅನ್ಯಾಯದ ವಿರುದ್ಧದ ಅತಿ ದೊಡ್ಡ ಅಸ್ತ್ರ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ತಮ್ಮ ಹೋರಾಟದ ವಿವರಗಳನ್ನು ದಾಖಲಿಸಿದ ತಕ್ಷಣ, ಅದು ದೇಶದ ಡಿಜಿಟಲ್ ನಕ್ಷೆಯ ಮೇಲೆ ಮೂಡುತ್ತದೆ. ನಿಮ್ಮಂತೆಯೇ ದೇಶದ ಇನ್ಯಾವ ಭಾಗದಲ್ಲಿ ಯಾರು ಅದೇ ವಿಷಯಕ್ಕಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಈ ನಕ್ಷೆಯ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು. ಬೆಲೆ ಏರಿಕೆ, ರೈತರ ಸಮಸ್ಯೆ, ಮಹಿಳಾ ಸುರಕ್ಷತೆ ಹೀಗೆ ಸಣ್ಣ ಅಥವಾ ದೊಡ್ಡ ಮಟ್ಟದ ಯಾವುದೇ ಪ್ರತಿಭಟನೆಯಾಗಿದ್ದರೂ ಜನರು ತಮ್ಮ ಗುಂಪಿನ ಹೆಸರಿನೊಂದಿಗೆ ಇಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ನೇರ ಬೆಂಬಲವನ್ನು ಕೋರಬಹುದು.
ದೇಶದ ಜನತೆಯನ್ನು ವಿಡಿಯೋ ಸಂದೇಶದ ಮೂಲಕ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ‘ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಹೋರಾಟಗಳಿಗೆ ಧ್ವನಿಯಾಗುವುದು ನನ್ನ ಜವಾಬ್ದಾರಿ. ನೀವು ಈ ವೇದಿಕೆಯಲ್ಲಿ ನಿಮ್ಮ ಕಥೆ ಹಂಚಿಕೊಂಡರೆ, ನಿಮ್ಮ ಪರವಾಗಿ ನಾನು ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇನೆ, ಬೀದಿಗಿಳಿದು ಹೋರಾಡಲಿದ್ದೇನೆ ಮತ್ತು ಅಗತ್ಯ ಬಿದ್ದಲ್ಲಿ ಅಧಿಕಾರಿಗಳಿಗೆ ಪತ್ರ ಬರೆದು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲಿದ್ದೇನೆ’ ಎಂದು ಭರವಸೆ ಕೊಟ್ಟಿದ್ದಾರೆ.














