ಗ್ರಾಮ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಾಗಿ ರಸ್ತೆಗಿಳಿದು ಹೋರಾಟ! ಕಾಂಗ್ರೆಸ್‌ ಸರ್ಕಾರದಿಂದ ಸ್ಥಳೀಯ ಚುನಾವಣೆಗಳು ವಿಳಂಬವಾಗುತ್ತಿದೆ!! ಸುದ್ದಿಗೋಷ್ಠಿಯಲ್ಲಿ ಸಂಜೀವ ಮಠಂದೂರು ಆರೋಪ!!

ಪುತ್ತೂರು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಸೇರಿದಂತೆ ಚುನಾಯಿತ ಸ್ಥಳೀಯ ಸಂಸ್ಥೆಗಳ ಅವಧಿ ಪೂರ್ಣಗೊಂಡಿದ್ದರೂ ಚುನಾವಣೆ ನಡೆಸದಿರುವುದರಿಂದ ರಾಜ್ಯದ ಸ್ಥಳೀಯ ಆಡಳಿತ ವ್ಯವಸ್ಥೆ ದುರ್ಬಲಗೊಂಡಿದೆ. ಇದರಿಂದ ಸ್ಥಳೀಯ ಮಟ್ಟದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದೆ. ರಾಜ್ಯ ಸರಕಾರ ತಕ್ಷಣ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬಿಜೆಪಿ ವತಿಯಿಂದ ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಾಗಿ ರಸ್ತೆಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಬರಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಬದಲು ಹಲವು ಹಂತಗಳಲ್ಲಿ ಅಧಿಕಾರ ಕೇಂದ್ರೀಕರಣವಾಗುತ್ತಿರುವುದು ಕಳವಳಕಾರಿ ಎಂದರು. ಆಯ್ಕೆಗಳ ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯಲ್ಲಿ ಚುನಾವಣೆ ನಡೆಯಬೇಕಾಗಿದೆ, ಆದರೆ ರಾಜ್ಯ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಒಂದೇ ಒಂದು ಪ್ರಮುಖ ಸ್ಥಳೀಯ ಸಂಸ್ಥೆಯ ಚುನಾವಣೆಯೂ ನಡೆದಿಲ್ಲ ಎಂದು ಅವರು ಆರೋಪಿಸಿದರು. ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯ ಅಧಿಕಾರ, ಅನುದಾನ ಹಾಗೂ ಆಡಳಿತಾತ್ಮಕ ಸ್ವಾಯತ್ತತೆ ನೀಡುವ ಮೂಲಕ ಚುನಾಯಿತ ಪ್ರತಿನಿಧಿಗಳಿಂದ ಜನರ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕು. ಚುನಾಯಿತ ಆಡಳಿತ ಇಲ್ಲದಿರುವುದು ಸ್ಥಳೀಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಹೇಳಿದರು. ಅವಧಿ ಮುಗಿದಿರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಸಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿರುವುದರಿಂದ ಕೇಂದ್ರದ ಅನುದಾನಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

Advertisement
Advertisement

ಸ್ಥಳೀಯ ಸಂಸ್ಥೆಗಳಿಗೆ ತಕ್ಷಣ ಚುನಾವಣೆ ನಡೆಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಸೂಚನೆ ನೀಡಿದ್ದರೂ ರಾಜ್ಯ ಸರಕಾರ ಎರಡು ವರ್ಷಗಳ ಹಿಂದೆ ಚುನಾವಣೆ ನಡೆಸುವುದಾಗಿ ಅಫಿಡವಿಟ್ ಸಲ್ಲಿಸಿ, ಇದುವರೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಸಂಜೀವ ಮಠಂದೂರು ಆರೋಪಿಸಿದರು. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವಿಂಗಡಣೆ ಈಗಾಗಲೇ ಪೂರ್ಣಗೊಂಡಿದೆ. ಗ್ರಾಮ ಪಂಚಾಯತ್‌ಗಳ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿಯೂ ಘೋಷಣೆಯಾಗಿದೆ. ಚುನಾವಣಾ ಆಯೋಗ ಸಿದ್ಧವಿದೆ ಎಂದು ಹೇಳುತ್ತಿದ್ದರೂ ಸರಕಾರದಿಂದ ಅಗತ್ಯ ಹಣಕಾಸು ಬಿಡುಗಡೆಯಾಗದ ಕಾರಣ ಚುನಾವಣೆ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದರು. ಎಲ್ಲ ವ್ಯವಸ್ಥೆಗಳು ಸಿದ್ಧವಾಗಿದ್ದರೂ ಚುನಾವಣೆ ನಡೆಯದಿರುವುದಕ್ಕೆ ಸರಕಾರದ ದಿವಾಳಿಯಾಗಿದೆ ಎಂಬುದು ಕಾರಣವಾಗಿರಬಹುದು ಎಂಬ ಅನುಮಾನ ಮೂಡುತ್ತಿದೆ’ ಎಂದು ಅವರು ಹೇಳಿದರು.

ಎಸ್‌ಐಆ‌ರ್ ಪ್ರಕ್ರಿಯೆಯ ಕಾರಣ ನೀಡಿ ಚುನಾವಣೆ ವಿಳಂಬವಾಗುತ್ತಿದೆ ಎಂಬ ಸರಕಾರದ ನಿಲುವನ್ನು ಪ್ರಶ್ನಿಸಿದ ಅವರು, ಪಕ್ಕದ ಕೇರಳದಲ್ಲಿ ಇದೇ ಸಂದರ್ಭದಲ್ಲಿ ಚುನಾವಣೆ ನಡೆದಿರುವುದನ್ನು ಗಮನಿಸಬೇಕು ಎಂದರು. ಕರ್ನಾಟಕದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಕಾಂಗ್ರೆಸ್ ಸರಕಾರ ದುರ್ಬಲಗೊಳಿಸುತ್ತಿದೆ ಎಂಬುದು ತಮ್ಮ ಆರೋಪ ಶಾಸಕರಿಗೆ ಮಾತ್ರ ಹೆಚ್ಚಿನ ಅಧಿಕಾರ ಇರಬೇಕು, ಸ್ಥಳೀಯ ಜನಪ್ರತಿನಿಧಿಗಳ ಅಗತ್ಯವಿಲ್ಲ ಎಂಬ ಮನೋಭಾವ ಸರಕಾರದಲ್ಲಿದೆ ಎಂದು ಅವರು ಟೀಕಿಸಿದರು. ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಅನುದಾನಗಳನ್ನೂ ಶಾಸಕರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕವೇ ನೀಡಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶ ಹಾಗೂ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಅವರು ಹೇಳಿದರು.

2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಅವಧಿಯಲ್ಲಿ ತಾಲೂಕುಗಳ ಸಂಖ್ಯೆ ಹೆಚ್ಚಳವಾಯಿತು. ನಂತರ ಹೊಸ ತಾಲೂಕುಗಳ ಆಧಾರದ ಮೇಲೆ ಸೀಮಾ ಆಯೋಗ ರಚಿಸಿ, ಗ್ರಾಮೀಣ ಪ್ರದೇಶಗಳ ಜನಸಂಖ್ಯೆ ಹಾಗೂ ಭೌಗೋಳಿಕ ವ್ಯಾಪ್ತಿಯನ್ನು ಆಧರಿಸಿ ಕ್ಷೇತ್ರಗಳ ವಿಂಗಡಣೆ ನಡೆಸಲಾಯಿತು ಎಂದರು. ಒಂದು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಕನಿಷ್ಠ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ಪಂಚಾಯತ್‌ ರಾಜ್ ಕಾಯ್ದೆಯಲ್ಲಿ ಬದಲಾವಣೆ ಅಗತ್ಯವಾಗಿದ್ದ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ವಿಳಂಬವಾಯಿತು. ಸೀಮಾ ಆಯೋಗದ ವರದಿ ಬಳಿಕ ಮತ್ತೊಂದು ಸಮಿತಿ ರಚನೆಯಾಗಿ, ಅದರ ಶಿಫಾರಸಿನ ಆಧಾರದ ಮೇಲೆ 2020ರಲ್ಲಿ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಯಿತು. ತಾಲೂಕು ಪಂಚಾಯತ್‌ಗಳಲ್ಲಿ ಸದಸ್ಯರ ಕನಿಷ್ಠ ಮತ್ತು ಗರಿಷ್ಠ ಸಂಖ್ಯೆಯನ್ನು ನಿಗದಿಪಡಿಸಲಾಯಿತು ಎಂದು ವಿವರಿಸಿದರು.
2022ರ ಡಿಸೆಂಬರ್‌ನಲ್ಲಿ ಪಕ್ರಿಯೆ ಪೂರ್ಣಗೊಂಡ ಬಳಿಕ ವಿಧಾನಸಭಾ ಚುನಾವಣೆ ಎದುರಾದ ಕಾರಣ ಮತ್ತಷ್ಟು ವಿಳಂಬವಾಯಿತು. ಇದೀಗ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ವಿಂಗಡಣೆ ಸೇರಿದಂತೆ ಬಹುತೇಕ ಪುಕ್ರಿಯೆಗಳು ಪೂರ್ಣಗೊಂಡಿದ್ರು, ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ., ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ತಾ.ಪಂ. ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ
ಬೋರ್ಕರ್, ಬಲ್ನಾಡು ಗ್ರಾ.ಪಂ. ನಿಕಟಪೂರ್ವ ಸದಸ್ಯೆ ಪರಮೇಶ್ವರಿ, ಬಿಜೆಪಿ ಮಾಧ್ಯಮ ವಕ್ತಾರ ರಾಜೇಶ್‌ ಬನ್ನೂರು ಹಾಗೂ ಕಿರಣ್‌ ಬಲ್ನಾಡು ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page