ಕನ್ನಡ ನಾಡು ಕಂಡ ಮೇರು ಬರಹಗಾರ ಎಸ್.ಎಲ್. ಭೈರಪ್ಪನವರು ಹುಟ್ಟಿದ್ದು ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ. 1934ನೇ ಇಸವಿಯ ಜುಲೈ 26 ಭೈರಪ್ಪನವರ ಜನ್ಮ ದಿನ. ಭೈರಪ್ಪನವರ ತಂದೆ ಲಿಂಗಣ್ಣಯ್ಯ, ತಾಯಿ ಗೌರಮ್ಮ, ಬಡತನವನ್ನೇ ಹೊದ್ದಂತಿದ್ದ ಕುಟುಂಬದಲ್ಲಿ ಜನಿಸಿದ ಭೈರಪ್ಪ, ಬಾಲ್ಯದ ವಿದ್ಯಾಭ್ಯಾಸವನ್ನು ತಮ್ಮ ಹಳ್ಳಿ ಮತ್ತು ಹತ್ತಿರದ ಊರಿನಲ್ಲಿಯೇ ಮುಗಿಸಿದರು.

ಭೈರಪ್ಪ, ಕೇವಲ ಹನ್ನೊಂದು ವರ್ಷದ ಬಾಲಕನಾಗಿದ್ದಾಗ, ಅವರ ತಾಯಿ ಪ್ಲೇಗ್ ಕಾಯಿಲೆಗೆ ತುತ್ತಾಗಿ ಕೊನೆಯುಸಿರಿಳೆದರು. ಬಡತನದ ಬೇಗೆಯ ಜೊತೆಗೆ ತಾಯಿಯ ಅಗಲಿಕೆ, ಬಾಲಕ ಭೈರಪ್ಪನನ್ನು ಅಪಾರ ಸಂಕಷ್ಟಕ್ಕೀಡುಮಾಡಿತು. ಹೀಗಿದ್ದರೂ ಧೃತಿಗೆಡದ ಭೈರಪ್ಪ, ವಿದ್ಯಾಭ್ಯಾಸ ಮುಂದುವರಿಸುವುದಕ್ಕಾಗಿ ಮೈಸೂರಿಗೆ ಬಂದು, ಶಾರದಾ ವಿಲಾಸ ಪ್ರೌಢಶಾಲೆ ಸೇರಿದರು. ಮೈಸೂರಿಗೆ ಬರುವುದಕ್ಕೆ ಮುಂಚೆಯೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದ ಬಾಲಕ ಭೈರಪ್ಪ, ಗಾಂಧಿ ಚಿಂತನೆಗಳಿಂದ ಪ್ರೇರೇಪಿತರಾಗಿದ್ದರು. ಆ ಹೊತ್ತಿನಲ್ಲಿ, ಹಳ್ಳಿಗಳಿಗೆ ಹೆಂಡ ಪೂರೈಸುತ್ತಿದ್ದ ಲಾರಿಗಳಿಗೆ ಅಡ್ಡ ನಿಂತಿದ್ದರು, ಬ್ರಿಟಿಷ್ ವಿರೋಧಿ ಭಾಷಣವನ್ನೂ ಮಾಡಿದ್ದ ಬಾಲಕ ಭೈರಪ್ಪನನ್ನು ಪೊಲೀಸ್ ಠಾಣೆಗೂ ಕರೆದೊಯ್ಯಲಾಗಿತ್ತು.

ಹೀಗಾಗಿ, ಹಳ್ಳಿಯಲ್ಲಿದ್ದಾಗಲೇ ಒಂದು ರೀತಿಯ ಹೋರಾಟ ಆರಂಭಿಸಿದ್ದ ಭೈರಪ್ಪ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ವಸತಿಗಾಗಿ ವಿದ್ಯಾರ್ಥಿನಿಲಯ ಮತ್ತು ಊಟಕ್ಕಾಗಿ ವಾರಾನ್ನವನ್ನು ಅವಲಂಬಿಸಿದ್ದರೂ ಕೂಡ, ಭೈರಪ್ಪನವರಲ್ಲಿ ಓದಬೇಕು ಎಂಬ ಛಲ ಹೆಚ್ಚಾಗಿತ್ತು. 1957ರಲ್ಲಿ ಮಹಾರಾಜ ಕಾಲೇಜಿನಿಂದ ಬಿ.ಎ ಆನರ್ಸ್ ಪದವಿ ಪಡೆದರು. ಅಷ್ಟಕ್ಕೆ ತೃಪ್ತರಾಗದೆ 1958ರಲ್ಲಿ ಮೈಸೂರು ವಿ.ವಿಯಲ್ಲಿ ಎಂ.ಎ ಪದವಿಗೆ ಸೇರಿಕೊಂಡರು. ಎಂ.ಎ ನಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್ ಗಳಿಸಿ, ವಿದ್ಯಾರ್ಥಿ ಬದುಕಿನ ಅತ್ಯುತ್ತಮ ಸಾಧನೆ ಮಾಡಿದರು.

ಆ ಬಳಿಕ, 1958 ರಿಂದ 60ರವರೆಗೆ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಮನಃಶಾಸ್ತ್ರ ಮತ್ತು ತತ್ವಶಾಸ್ತ್ರದ ಅಧ್ಯಾಪಕರಾದರು. 1960 ರಿಂದ 66ರ ವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾದರು. ಇದೇ ವೇಳೆ “Truth and Beauty (ಸತ್ಯ ಮತ್ತು ಸೌಂದರ್ಯ) ಎಂಬ ಮಹಾ ಪ್ರಬಂಧ ರಚಿಸಿದ ಎಸ್.ಎಲ್.ಭೈರಪ್ಪ, ಬರೋಡಾದ ಸಯ್ಯಾಜಿ ರಾವ್ ವಿ.ವಿಯಿಂದ ಡಾಕ್ಟರೇಟ್ ಪದವಿ ಪಡೆದರು. 1967ರಿಂದ 1971ರವರೆಗೆ ದೆಹಲಿಯಲ್ಲಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT)ಯಲ್ಲಿ ಪ್ರಾಧ್ಯಾಪಕರಾಗಿದ್ದ ಎಸ್.ಎಲ್.ಭೈರಪ್ಪ, ಆ ನಂತರ, ಅದೇ ಸಂಸ್ಥೆಯ ಅಂಗವಾಗಿರುವ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE – Regional Institute of Education)ಯಲ್ಲಿ ಸೇವೆ ಸಲ್ಲಿಸಿ 1991ರಲ್ಲಿ ನಿವೃತ್ತಿ ಹೊಂದಿದರು.
ಎಷ್ಟೇ ಬಡತನವಿದ್ದರೂ ಶಿಸ್ತುಬದ್ಧ ವಿದ್ಯಾರ್ಥಿಯಾಗಿ ಕಷ್ಟಪಟ್ಟು ಓದಿ, ಬದುಕನ್ನು ಕಟ್ಟಿಕೊಂಡ ಎಸ್.ಎಲ್.ಭೈರಪ್ಪನವರು, ಇಂಟರ್ ಮೀಡಿಯಟ್ ನಲ್ಲಿ ಓದುತ್ತಿರುವಾಗಲೇ ಬರವಣಿಗೆ ಆರಂಭಿಸಿದ್ದರು. ‘ಗತಜನ್ಮ’ ಎಂಬ ನೀಳತೆ, ‘ಭೀಮಕಾಯ’ ಮತ್ತು ‘ಬೆಳಕು ಮೂಡಿತು’ ಎಂಬ ಕಾದಂಬರಿಗಳನ್ನು ರಚಿಸಿದ್ದರು. ಆದರೆ, ಆರಂಭಿಕ ರಚನೆಗಳಾದ ಇವುಗಳ ಮೇಲೆ, ಅದಾಗಲೇ ಕಾದಂಬರಿ ಸಾರ್ವಭೌಮ ಎಂದು ಹೆಸರಾಗಿದ್ದ ಅನಕೃ ಅವರ ಪ್ರಭಾವವಿತ್ತಂತೆ.

ಆ ಬಳಿಕ, 1962ರಲ್ಲಿ ‘ದೂರಸರಿದರು’, 1965ರಲ್ಲಿ ‘ಮತದಾನ’ ಮತ್ತು ‘ವಂಶವೃಕ್ಷ’ ಕಾದಂಬರಿಗಳು, 1967ರಲ್ಲಿ ‘ಜಲಪಾತ’, 1968ರಲ್ಲಿ ‘ನಾಯಿ ನೆರಳು’ ಮತ್ತು ‘ತಬ್ಬಲಿಯು ನೀನಾದೆ ಮಗನೆ’, ಗೃಹಭಂಗ (1970), ಯಾನ(2014), ಉತ್ತರಕಾಂಡ(2017) ಸೇರಿದಂತೆ ಈವರೆಗೆ 24 ಕಾದಂಬರಿಗಳನ್ನು ಬರೆದಿದ್ದಾರೆ.
ಇಷ್ಟು ಮಾತ್ರವಲ್ಲದೆ, ತಮ್ಮ ಸಂಶೋಧನಾ ಪ್ರಬಂಧದ ಕನ್ನಡ ರೂಪ, ‘ಸತ್ಯ ಮತ್ತು ಸೌಂದರ್ಯ(1966), ‘ಸಾಹಿತ್ಯ ಮತ್ತು ಪ್ರತೀಕ'(1967), ‘ಕಥೆ ಮತ್ತು ಕಥಾವಸ್ತು(1969), ‘ನಾನೇಕೆ ಬರೆಯುತ್ತೇನೆ'(1980) ಎಂಬ ಪುಸ್ತಕಗಳ ಮೂಲಕ ತಮ್ಮ ಚಿಂತನೆಗಳನ್ನು ಪ್ರಕಟಿಸಿದ್ದಾರೆ.
1996ರಲ್ಲಿ ಬರೆದ ‘ಭಿತ್ತಿ’, ಭೈರಪ್ಪನವರ ಆತ್ಮ ಚರಿತ್ರೆ. ಚಿತ್ರ ಮತ್ತು ಶಿಲ್ಪ ಕಲೆಗಳಲ್ಲೂ ಅಭಿರುಚಿ ಹೊಂದಿರುವ ಭೈರಪ್ಪನವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಗ್ಗೆ ಅಪಾರ ಒಲವನ್ನು ಹೊಂದಿದ್ದಾರೆ. ‘ಗಂಗೂ ಬಾಯಿ ಹಾನಗಲ್ ಪುಸ್ತಕದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಇಂಗ್ಲಿಷ್ ಭಾಷೆಯಲ್ಲೂ ಪ್ರೌಢಿಮೆ ಹೊಂದಿರುವ ಭೈರಪ್ಪನವರು, “Values in Modern Indian Educational Thought” ಮುಂತಾದ ಪ್ರಕಟಣೆಗಳನ್ನು ಹೊರತಂದಿದ್ದಾರೆ.
ಎಸ್.ಎಲ್.ಭೈರಪ್ಪನವರ ಈವರೆಗಿನ ಹಲವಾರು ಕೃತಿಗಳು ನಾಟಕಗಳಾಗಿ, ಟಿವಿ ಧಾರಾವಾಹಿ ಮತ್ತು ಸಿನೆಮಾಗಳಾಗಿ ಜನಪ್ರಿಯವಾಗಿವೆ. ಕನ್ನಡ ಮತ್ತು ಹಿಂದಿಯಲ್ಲಿ ನಾಟಕವಾಗಿ ಪ್ರದರ್ಶನಗೊಂಡ ‘ವಂಶವೃಕ್ಷ’ ಕಾದಂಬರಿಯ ಕನ್ನಡ ರಂಗರೂಪವನ್ನು, ಸಿಂಧುವಳ್ಳಿ ಅನಂತಮೂರ್ತಿ ಹಾಗೂ ಹಿಂದಿ ರಂಗರೂಪವನ್ನು ಪ್ರತಿಭಾ ಪ್ರಹ್ಲಾದ್ ಸಿದ್ಧಪಡಿಸಿದ್ದರು. ‘ಮಂದ್ರ’ ವನ್ನು ಡಾ. ಬಿ.ವಿ.ರಾಜಾರಾಮ್ ಮತ್ತು ರಾಮನಾಥ್ ಅವರು ಪ್ರತ್ಯೇಕವಾಗಿ ರಂಗಕ್ಕೆ ಅಳವಡಿಸಿದ್ದರು. ಪ್ರಖ್ಯಾತ ನೃತ್ಯ ಕಲಾವಿದೆ ತುಳಸಿ ರಾಮಚಂದ್ರ ಅವರು, ‘ಸಾರ್ಥ’ ಕಾದಂಬರಿಯನ್ನು ನೃತ್ಯ ರೂಪಕವಾಗಿ ಪ್ರಸ್ತುತಪಡಿಸಿದ್ದರು.
1972ರಲ್ಲಿ ‘ವಂಶವೃಕ್ಷ’, ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತ ಅವರ ನಿರ್ದೇಶನದಲ್ಲಿ ಸಿನೆಮಾ ಆಗಿತ್ತು. 1975ರಲ್ಲಿ ವಂಶವೃಕ್ಷ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ, ಮತ್ತೆ ಗಿರೀಶ್ ಕಾರ್ನಾಡ್ ಮತ್ತು ಬಿ.ವಿ.ಕಾರಂತರ ನಿರ್ದೇಶನದಲ್ಲಿ ತೆರೆಗೆ ಬಂದಿತ್ತು. ಮತದಾನ (2000, ಟಿ.ಎನ್.ಸೀತಾರಾಮ್), ನಾಯಿ ನೆರಳು(2006, ಗಿರೀಶ್ ಕಾಸರವಳ್ಳಿ ನಿರ್ದೇಶನ) ಸಿನೆಮಾ ಆಗಿ ಜನಪ್ರಿಯವಾಗಿದ್ದವು.
ಭೈರಪ್ಪನವರ ‘ಗೃಹಭಂಗ’ ಕಾದಂಬರಿ, ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಅತ್ಯಂತ ಜನಪ್ರಿಯವಾಗಿತ್ತು. ಮತ್ತೊಂದು ಕಾದಂಬರಿ ‘ದಾಟು’, ಬಸು ಚಟರ್ಜಿ ನಿರ್ದೇಶನದಲ್ಲಿ ‘ಉಲ್ಲಂಘನ್’ ಎಂಬ ಹೆಸರಿನಲ್ಲಿ ಹಿಂದಿ ಧಾರಾವಾಹಿಯಾಗಿ ಪ್ರಸಾರವಾಗಿತ್ತು.
ಕೆಲವು ವರ್ಷಗಳ ಹಿಂದೆ ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ ಮೂಡಿಬಂದ ಪರ್ವ ಕಾದಂಬರಿ ಆಧಾರಿತ ನಾಟಕ ಹೊಸ ಸಂಚಲನವನ್ನೇ ಸೃಟ್ಟಿಸಿತ್ತು.

ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಭೈರಪ್ಪನವರು ಹಲವಾರು ಅತ್ಯುನ್ನತ ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. 1968ರಲ್ಲಿ ‘ವಂಶವೃಕ್ಷ’ ಮತ್ತು 1974ರಲ್ಲಿ ‘ದಾಟು’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದಲ್ಲದೆ, 2006ರಲ್ಲಿ ರಾಜ್ಯ ಸರ್ಕಾರದಿಂದ ಪಂಪ ಪ್ರಶಸ್ತಿ, 2011ರಲ್ಲಿ ಪ್ರತಿಷ್ಟಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ಭೈರಪ್ಪನವರಿಗೆ ಸಂದಿವೆ. ಭಾರತದ ಹಲವು ವಿಶ್ವವಿದ್ಯಾಲಯಗಳು ಭೈರಪ್ಪನವರಿಗೆ ಗೌರವ ಡಾಕ್ಟರೇಟ್ ನೀಡಿವೆ. ಭೈರಪ್ಪನವರು 1999ರಲ್ಲಿ ಕನಕಪುರದಲ್ಲಿ ನಡೆದ 67ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಭೈರಪ್ಪನವರ ಕಾದಂಬರಿಗಳ ಮೇಲೆ ಅನೇಕರು ಸಂಶೋಧನಾ ಪ್ರಬಂಧಗಳನ್ನು ರಚಿಸಿ M.Phil ಮತ್ತು Doctorate ಪದವಿಗಳನ್ನು ಪಡೆದಿದ್ದಾರೆ. ಭೈರಪ್ಪನವರ ಕಾದಂಬರಿಗಳ ಬಗ್ಗೆ ಅನೇಕ ವಿಮರ್ಶಾ ಗ್ರಂಥಗಳು ರಚಿಸಲ್ಪಟ್ಟಿವೆ.
ಭಾರತ ಸರ್ಕಾರ 2014ರಲ್ಲಿ ಭೈರಪ್ಪನವರನ್ನು National Research Professor ಆಗಿ ನೇಮಕ ಮಾಡಿದೆ. 1949ರಲ್ಲಿ ಆರಂಭಿಸಿದ ಈ ಗೌರವ ಹುದ್ದೆಯನ್ನು, 65 ವರ್ಷ ವಯೋಮಾನ ದಾಟಿದ ಮತ್ತು ತಮ್ಮ ಕ್ಷೇತ್ರಗಳಿಗೆ ಅಸಾಧಾರಣ ಕೊಡುಗೆ ನೀಡಿರುವ ದೇಶದ ಅತ್ಯುನ್ನತ ಶಿಕ್ಷಣತಜ್ಞರು ಹಾಗೂ ವಿದ್ವಾಂಸರನ್ನು ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇದಾದ ಬಳಿಕ, 2016ರಲ್ಲಿ, ಭೈರಪ್ಪನವರಿಗೆ ‘ಪದ್ಮಶ್ರೀ’ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.
ಇಂದು ಅವರ ಸಂಸ್ಮರಣಾ ದಿನ. ಕನ್ನಡದ ಮೇರು ಬರಹಗಾರನಿಗೆ ನಮನ!!














