ಬಂಟ್ವಾಳ : ಇಲ್ಲಿನ ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಬಳಸಿ ಟೈಲರಿಂಗ್ ಮತ್ತು ವಸ್ತ್ರ ಮಳಿಗೆ ಆರಂಭಿಸಿ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ. ಇಲ್ಲಿನ ಮಾವಿನಕಟ್ಟೆ ನಿವಾಸಿ, ‘ಗೃಹಲಕ್ಷ್ಮಿ’ ಯೊಜನೆಯ ಫಲಾನುಭವಿ ಶಕುಂತಲಾ ಅವರು, ಪ್ರತಿ ತಿಂಗಳು ಬರುತ್ತಿದ್ದ ತಲಾ ₹2 ಸಾವಿರವನ್ನು ಕೂಡಿಟ್ಟು ಕನಸಿನಂತೆ ‘ಶ್ರೀ ದುರ್ಗಾ ಗೃಹಲಕ್ಷ್ಮಿ ಟೆಕ್ಸ್ಟೈಲ್ಸ್ ಆ್ಯಂಡ್ ಗಾರ್ಮೆಂಟ್ಸ್’ ಆರಂಭಿಸಿದ್ದಾರೆ.
ಗುರುವಾರ ಆರಂಭಗೊಂಡ ಈ ಮಳಿಗೆಗೆ ಭೇಟಿ ನೀಡಿದ ಬಂಟ್ವಾಳ ತಾಲ್ಲೂಕು ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಹಾಗೂ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ ಅವರು ಶಕುಂತಳಾ ಅವರನ್ನು ಅಭಿನಂದಿಸಿದ್ದಾರೆ.
‘ಫಲಾನುಭವಿ ಶಕುಂತಲಾ ಅವರ ಸಾಧನೆ ಇತರ ಮಹಿಳೆಯರಿಗೆ ಸ್ಸ್ಫೂರ್ತಿಯಾಗಿದ್ದು, ಮಹಿಳಾ ಸ್ವಾವಲಂಬನೆಗೆ ಪ್ರೇರಣೆಯಾಗಿದೆ’ ಎಂದು ಜಯಂತಿ ಪೂಜಾರಿ ಶ್ಲಾಘಿಸಿದರು.
‘ನಾನು ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಮೂರು ವರ್ಷಗಳಿಂದ ‘ಗೃಹಲಕ್ಷ್ಮಿ’ಯ ₹72 ಸಾವಿರ ಸಂಗ್ರಹಿಸಿ, ಒಟ್ಟು ₹2.50 ಲಕ್ಷ ವೆಚ್ಚದಲ್ಲಿ ಎರಡು ಟೈಲರಿಂಗ್ ಯಂತ್ರ ಸಹಿತ ಟೆಕ್ಸ್ಟೈಲ್ ಆರಂಭಿಸಿದ್ದೇನೆ. ನನ್ನ ಪತಿ ಜಯಾನಂದ ಅವರು ಚಾಲಕರಾಗಿದ್ದು, ಇಬ್ಬರು ಪುತ್ರರು ವಿದ್ಯಾರ್ಥಿಗಳಾಗಿದ್ದಾರೆ’ ಎಂದು ಶಕುಂತಳಾ ಮಾಧ್ಯಮಗಳಿಗೆ ಹೇಳಿದ್ದಾರೆ.














