ಕರ್ನಾಟಕ ಸರ್ಕಾರವೇ ಕರಾವಳಿ ನೆಲದಲ್ಲಿ ನಿಂತು ತುಳು ಭಾಷೆಗೆ ಮಾನ್ಯತೆ ಸಹಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಅಭಿವೃದ್ಧಿಗೆ ಮುನ್ನುಡಿಯಿಡುವ ಸುಂದರ ಕ್ಷಣ ಇನ್ನೇನು ಎರಡು ದಿನದಲ್ಲಿ ಬರಲಿದೆ. ದೇಶದಲ್ಲೇ ಆರೋಗ್ಯ, ಶಿಕ್ಷಣ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೆಗ್ಗುರುತಾಗಿ ನಿಂತಿರುವ ಈ ಜಿಲ್ಲೆಗಳಿಗೆ ಭವಿಷ್ಯಕ್ಕೆ ಆಧಾರಸ್ತಂಭವಾಗುವ ಕೆಲವೊಂದು ಯೋಜನೆಗಳು ಬರಲೇಬೇಕೆಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿದೆ. ಯಾಕೆಂದರೆ ಬಂದರು ನಗರಿ, ವಿಮಾನ ನಿಲ್ದಾಣ, ರೈಲ್ವೇ, ಗಡಿ ಪ್ರದೇಶ, ಅಡಿಕೆ ಬೆಳಗಾರರಿರುವ ಬುದ್ಧಿವಂತರ ಜಿಲ್ಲೆ.
ಯಾವೆಲ್ಲಾ ಯೋಜನೆಗಳು ಘೋಷಣೆಯಾಗಬಹುದು ಮತ್ತು ಇಲ್ಲಿನ ಜನರ ಬೇಡಿಕೆಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ…
ಯೋಜನೆಗಳು :
- ಪಣಂಬೂರು ಬೀಚ್, ಮಲ್ಪೆ ಬೀಚ್, ತಣ್ಣಿರುಬಾವಿ ಬೀಚ್‌ಗಳಲ್ಲಿ ಸಂಗೀತ ಕಾರಂಜಿಯ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಅಭಿವೃದ್ಧಿ.
- ವ್ಯವಹಾರಿಕ ಉದ್ದೇಶದಿಂದ 24 ಗಂಟೆ ತೆರೆದಿರುವ ಉದ್ಯಮಕ್ಕೆ ಒತ್ತು.
- ಗಾಂಜಾ ಪತ್ತೆಗೆ ಜಿಲ್ಲೆಯ ಪ್ರತೀ ತಾಲೂಕಿನಲ್ಲೂ ಪ್ರತ್ಯೇಕ ತಂಡದ ರಚನೆ.
- ಕರಾವಳಿಯ ಅತೀ ಹೆಚ್ಚು ಯಾತ್ರಾರ್ಥಿಗಳನ್ನು ಸೆಳೆಯುವ ದೇವಾಲಯಗಳಿಗೆ ಅನುದಾನ.
- ಅಜೀರ್ಣಾವಸ್ಥೆಯ ದೇವಾಲಯಗಳು, ಬಸದಿಗಳು ಮುಂತಾದ ಧಾರ್ಮಿಕ ಸ್ಥಳಗಳ ಜೀರ್ಣೊದ್ಧಾರ.
- ಕೇಂದ್ರದ ಜೊತೆ ಕೈ ಜೋಡಿಸಿಕೊಂಡು ಸಮಗ್ರ ರಸ್ತೆ ಅಗಲೀಕರಣ.
- ಇತ್ತೀಚಿಗೆ ಐತಿಹಾಸಿಕ ತೀರ್ಪಿನೊಂದಿಗೆ ಪಾಲಕ್ಕಾಡಿನಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಂಡ ಮಂಗಳೂರು ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಒತ್ತು.
- ಕೊಳೆರೋಗ, ಹಳದಿ ಚುಕ್ಕಿ ಮುಂತಾದ ರೋಗಭಾಧಿತ ಅಡಿಕೆ ಬೆಳೆಗೆ ಪರ್ಯಾಯ ಬೆಳೆಯ ಬೆಂಬಲ.
- ಬೆಳೆ ಸಮೀಕ್ಷೆಯ ವಿಮೆ ಯೋಜನೆಗೆ ಹೆಚ್ಚು ಅನುದಾನ ನೀಡಿ ರೈತರ ಸಮಸ್ಯೆಗಳಿಗೆ ಬೆನ್ನೆಲುಬಾಗುವುದು.
- 94ಸಿ ಅರ್ಜಿ ಸ್ವೀಕಾರಕ್ಕೆ ಅವಕಾಶ ಮತ್ತು ಜಾಗದ ವಿಸ್ತೀರ್ಣ ಹೆಚ್ಚಿಸುವುದು.
- ಸರ್ಕಾರಿ ಶಾಲಾ ಅಭಿವೃದ್ಧಿಗೆ ಹೆಚ್ಚಿನ ಒತ್ತು.
- ಕರಾವಳಿಯ ಯಕ್ಷಗಾನ ಕಲಾವಿದರು ಮತ್ತು ದೈವಾರಾಧನೆಯ ವಿಭಾಗದವರಿಗೆ 60 ವರ್ಷ ದಾಟಿದ ನಂತರ ಪಿಂಚಣಿ ಯೋಜನೆ.
- ಕರಾವಳಿಯ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ.
ಇದರಲ್ಲಿ ಯಾವುದಕ್ಕೆ ಸರ್ಕಾರ ಕರಾವಳಿಯ ಕ್ಯಾಬಿನೆಟ್‌ನಲ್ಲಿ ಒತ್ತು ನೀಡುತ್ತದೋ ಕಾದು ನೋಡಬೇಕಿದೆ.














