ಪುತ್ತೂರು: ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಘೋಷಿಸುವಲ್ಲಿ ಪುತ್ತೂರು ಶಾಸಕ ಅಶೋಕ್ ರೈಯವರ ಭಗೀರಥ ಪ್ರಯತ್ನವಿದ್ದು, ಅವರು ಬಹಳ ವ್ಯವಸ್ಥಿತ ರೀತಿಯಲ್ಲಿ ಅಧ್ಯಯನ ನಡೆಸಿ ವರದಿ ನೀಡಿದ ಫಲವಾಗಿ ಈ ಘೋಷಣೆ ಸಾಧ್ಯವಾಗಿದೆ. ಜೊತೆಗೆ ಪುತ್ತೂರಿನ ಮೆಡಿಕಲ್ ಕಾಲೇಜಿನ ಅನುಮೋದನೆಗೂ ಅವರ ಇಚ್ಚಾಶಕ್ತಿಯೇ ಕಾರಣ ಎಂದು ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಹೇಳಿದರು.
ಅವರು ಶನಿವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಂಗಳೂರಿನಲ್ಲಿ ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಡಿಕೆಶಿಯವರು ನಿರೀಕ್ಷೆಗೂ ಮೀರಿದ ಅನುದಾನವನ್ನು ಕರಾವಳಿ, ಮಲೆನಾಡಿಗೆ ನೀಡಿದ್ದು, ಅದರಲ್ಲೂ ತುಳುವಿನ ಅಧಿಕೃತ ಸ್ಥಾನಮಾನವೂ ಬಹಳ ಪ್ರಾಮುಖ್ಯವಾಗಿದೆ. ಇದು ಕಳೆದ ಹಲವು ದಶಕಗಳ ಹೋರಾಟವಾಗಿದ್ದರೂ, ಹಿಂದಿನವರು ಯಾರೂ ಕೂಡ ಅದರ ಕುರಿತು ವ್ಯವಸ್ಥಿತ ಪ್ರಯತ್ನ ನಡೆಸಿರಲಿಲ್ಲ. ಅಶೋಕ್ ರೈಯವರು ಮೊದಲ ಅಧಿವೇಶನದಲ್ಲೇ ತುಳುವಿನ ಕುರಿತು ಪ್ರಸ್ತಾಪಿಸಿ ಅಧಿಕೃತ ಸ್ಥಾನಮಾನಕ್ಕೆ ಒತ್ತಾಯ ಮಾಡಿದ್ದರು. ಜತೆಗೆ ಆಂಧ್ರ, ಪಶ್ಚಿಮಬಂಗಾಲಕ್ಕೆ ತಮ್ಮ ವೈಯಕ್ತಿಕ ನೆಲೆಯಲ್ಲಿ ಖರ್ಚು ಮಾಡಿ ಅಧ್ಯಯನ ತಂಡವನ್ನು ಕಳುಹಿಸಿದ್ದರು. ಮೆಡಿಕಲ್ ಕಾಲೇಜು ಮಂಜೂರಾತಿಗೂ ಶಾಸಕರ ವಿಶೇಷ ಪ್ರಯತ್ನವಿದ್ದು, ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳ ಬೆನ್ನು ಬಿದ್ದು ಪ್ರಯತ್ನ ನಡೆಸಿ ಪ್ರಸ್ತುತ ಸಚಿವ ಸಂಪುಟವು 549.79 ಕೋ.ರೂ.ಗಳಿಗೆ ಅನುಮೋದನೆ ನೀಡಿದೆ. ಮುಂದಿನ ದಿನಗಳಲ್ಲಿ ತುಳು ಲಿಪಿಯ ಅಧ್ಯಯನ ನಡೆಸಿ ಎಲ್ಲಾ ಫಲಕಗಳು ತುಳುವಿನಲ್ಲೇ ಇರಬೇಕಿದ್ದು, ಈ ನಿಟ್ಟಿನಲ್ಲಿ ವಯಸ್ಕರ ಶಿಕ್ಷಣದ ಮಾದರಿಯಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ತುಳು ಲಿಪಿ ಕಲಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದರು.
ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್ ಮಾತನಾಡಿ, ಮಂಗಳೂರಿನ ಸಚಿವ ಸಂಪುಟ ಸಭೆಯ ಕುರಿತು ವಿಪಕ್ಷ ನಾಯಕ ಆರ್.ಅಶೋಕ್ ಟೀಕೆ ಮಾಡಿದ್ದು, ಬಿಜೆಪಿಗೆ ಅಭಿವೃದ್ಧಿ ಬೇಕಿಲ್ಲ. ಹೀಗಾಗಿ ಈ ರೀತಿ ಟೀಕೆ ಮಾಡುತ್ತಾರೆ. ಆದರೆ ರಾಜ್ಯ ಸರಕಾರಕ್ಕೆ ಇಚ್ಚಾಶಕ್ತಿ ಇದ್ದ ಕಾರಣದಿಂದಲೇ ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ಐತಿಹಾಸಿಕ ತೀರ್ಮಾನ ಸಾಧ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಕೃಷ್ಣಪ್ರಸಾದ್ ಆಳ್ವ, ಯು.ಟಿ. ತೌಸೀಫ್, ಡಾ. ರಾಜಾರಾಂ ಕೆ.ಬಿ., ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.














