2027ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್, ನಾನು ಭಾರತದ ಪರ ಆಡುವ ಕೊನೆಯ ವಿಶ್ವಕಪ್ ಆಗಿರಲಿದೆ ಎಂದು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಜಿಯೋ ಹಾಟ್‌ಸ್ಟಾರ್ ಮಾಡಿರುವ ಸಂದರ್ಶನದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, ‘2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನನ್ನ ಕೊನೆಯ ಟೂರ್ನಿಯಾಗಿರಲಿದ್ದು, ಅದನ್ನು ಗೆಲ್ಲುವುದು ನನ್ನ ಗುರಿಯಾಗಿದೆ’ ಎಂದು ಹೇಳಿದ್ದಾರೆ.
ಏಕದಿನ ವಿಶ್ವಕಪ್‌ನ ತೀವ್ರತೆಯು ಎಲ್ಲದಕ್ಕಿಂತ ಹೆಚ್ಚಿನದು. ಅದರ ಒಂದು ಪಂದ್ಯವು 10 ಟಿ–20 ಪಂದ್ಯಗಳಿಗೆ ಸಮಾನ. ವಿಶ್ವಕಪ್‌ನಲ್ಲಿ ಈ ಒತ್ತಡ ಇನ್ನೂ ಹೆಚ್ಚಾಗಿರುತ್ತದೆ. ಅದರಲ್ಲೂ ಮುಂದಿನ ವರ್ಷ ವಿದೇಶಿ ಅಂಗಳದಲ್ಲಿ ಟೂರ್ನಿ ನಡೆಯುತ್ತಿದೆ. ನನ್ನ ಪಾಲಿಗೆ ಇದು ಭಾರತದ ಪರ ಆಡುತ್ತಿರುವ ಕೊನೆಯ ವಿಶ್ವಕಪ್ ಆಗಿದೆ. ಹಾಗಾಗಿ, ಪಂದ್ಯದ ವೇಳೆ ನನ್ನ ಎಲ್ಲವನ್ನೂ ಕೊಡಲು ಇದು ಪ್ರೇರಣೆ ನೀಡುತ್ತದೆ. ವಿಶ್ವಕಪ್ ಗೆಲ್ಲುವುದೇ ನಮ್ಮ ಗುರಿಯಾಗಿದ್ದು, ಅದಕ್ಕೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿರುವ ರೋಹಿತ್ ಶರ್ಮಾ , ‘ಐಸಿಸಿ ಟೂರ್ನಿಗಳಲ್ಲಿ ಆಡುವಾಗ ಅದರದೇ ಆದ ವಿಶಿಷ್ಟ ಸವಾಲು ಎದುರಾಗುತ್ತದೆ. ವಿವಿಧ ಎದುರಾಳಿಗಳು ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಪಂದ್ಯಗಳು ನಡೆಯುತ್ತವೆ. ಇದಕ್ಕಾಗಿ ಬೇರೆಯದೇ ರೀತಿಯ ತಯಾರಿಯ ಅಗತ್ಯವಿರುತ್ತದೆ. ನಾನು ಕೂಡ ವಿಶ್ವಕಪ್ ಗೆಲ್ಲುವ ಕಡೆ ಯೋಚಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಈಗಾಗಲೇ ಅಂತಾರಾಷ್ಟ್ರೀಯ ಟೆಸ್ಟ್ ಮತ್ತು ಟಿ–20 ಕ್ರಿಕೆಟ್‌ಗೆ ನಿವೃತ್ತಿ ನೀಡಿರುವ ವಿರಾಟ್ ಮತ್ತು ರೋಹಿತ್, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ಸೆ.27ರಂದು ನಡೆಯಲಿದೆ. ಬಹಳ ಸಮಯದ ನಂತರ ಈ ಇಬ್ಬರು ಸ್ಟಾರ್ ಆಟಗಾರರು ಭಾರತದ ಪರ ಕಣಕ್ಕಿಳಿಯುತ್ತಿದ್ದಾರೆ.










