ಮಂಗಳೂರು: ಅಕ್ರಮ ಗೋಹತ್ಯೆ ಅಥವಾ ಅಕ್ರಮ ಜಾನುವಾರು ಸಾಗಣೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ, ಕಾನೂನುಬದ್ಧವಾಗಿ ನಡೆಯುವ ಮಾಂಸ ಸಾಗಣೆಗೆ ಅಡ್ಡಿಪಡಿಸುವುದು, ವಾಹನಗಳನ್ನು ತಡೆಯುವುದು ಅಥವಾ ಕಾನೂನು ಕೈಗೆತ್ತಿಕೊಳ್ಳುವುದು ಅಪರಾಧವಾಗಿದೆ. ಇಂತಹವರ ವಿರುದ್ಧ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಕಾನೂನಿನಡಿ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಕೇರಳದಿಂದ ಮಂಗಳೂರಿಗೆ ಮಾಂಸ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಪರಿಶೀಲಿಸಿದ್ದು, ಅಧಿಕೃತ ಪರವಾನಗಿ ಹೊಂದಿರುವ ಮಾಂಸದ ಅಂಗಡಿಗೆ ಮಾಂಸ ಸಾಗಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ, ಆದರೆ, ಕಾನೂನುಬದ್ಧವಾಗಿ ಮಾಂಸ ಸಾಗಣೆ ಮತ್ತು ಮಾರಟ ಮಾಡಲು ಅವಕಾಶವಿದೆ. ಇಂತಹ ಸಾಗಣೆಗೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಹಲ್ಲೆಗೆ ಮುಂದಾಗುವುದು ಅಪರಾಧ ಎಂದು ಅವರು ಹೇಳಿದ್ದಾರೆ. ಇನ್ನು ಸೋಮವಾರ ಬೆಳಗಿನ ಜಾವ ಮಾಂಸದ ವಾಹನವನ್ನು ಕೆಲವರು ಅಡ್ಡಗಟ್ಟಲು ಯತ್ನಿಸಿದ್ದಾರೆ ಎಂಬ ದೂರು ಪೊಲೀಸರಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಅಕ್ರಮ ಗೋಹತ್ಯೆ ಅಥವಾ ಜಾನುವಾರು ಸಾಗಣೆ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಬೇಕು. ಸಾರ್ವಜನಿಕರು ಅಥವಾ ಸಂಘಟನೆಗಳ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.












