ವಿಜಯಪುರ ಜಿಲ್ಲೆಯಲ್ಲಿ ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ಸಾರ್ವಜನಿಕರಿಗೆ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಜಿಲ್ಲೆಯಾದ್ಯಂತ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಹಾಗೂ ಕಳ್ಳತನವಾಗಿದ್ದ ಬರೋಬ್ಬರಿ 537 ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇಂದ್ರ ಸರ್ಕಾರದ ತಂತ್ರಜ್ಷಾನ ಆಧಾರಿತ ಸಿಇಐಆರ್ ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪತ್ತೆ ಹಚ್ಚಲಾದ ಈ ಮೊಬೈಲ್ಗಳನ್ನು ಅವುಗಳ ನೈಜ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಜಿಲ್ಲೆಯ ಎಲ್ಲಾ 28 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಕಳೆದ ಮೂರು ತಿಂಗಳ ಅವಧಿಯಲ್ಲಿ ಸತತ ಪ್ರಯತ್ನ ನಡೆಸಿ 537 ಮೊಬೈಲ್ಗಳನ್ನು ಹುಡುಕಲಾಗಿದೆ. ಪತ್ತೆಯಾದ ಒಟ್ಟು 537 ಮೊಬೈಲ್ಗಳ ಅಂದಾಜು ಮೌಲ್ಯ ಬರೋಬ್ಬರಿ 1 ಕೋಟಿ 7 ಲಕ್ಷದ 40 ಸಾವಿರ ರೂಪಾಯಿ ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಲಕ್ಷ್ಮಣ ನಿಂಬರಗಿ, “ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಅತ್ಯಗತ್ಯ ಮೊಬೈಲ್ ಕಳೆದುಹೋದ ತಕ್ಷಣ ಸಾರ್ವಜನಿಕರು ಆತಂಕಪಡುವ ಅಗತ್ಯವುಲ್ಲ. ಮೊಬೈಲ್ನ IMEI ಸಂಖ್ಯೆಯನ್ನು ಆಧರಿಸಿ ಕೇಂದ್ರ ಸರ್ಕಾರದ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಬಹುದು. ಫೋನ್ ಕಳೆದುಹೋದ ತಕ್ಷಣ ಸಮೀಪದ ಠಾಣೆಯಲ್ಲಿ ದೂರು ದಾಖಲಿಸಿ, CEIR ಪೋರ್ಟಲ್ನಲ್ಲಿ ಬ್ಲಾಕ್ ಮಾಡಲು ಮನವಿ ಸಲ್ಲಿಸಿ” ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.













