ಮಂಗಳೂರು/ಬೆಂಗಳೂರು, ಫೆಬ್ರವರಿ 20: ಬಿಎಸ್ಎನ್ಎಲ್ ಕಚೇರಿಯಲ್ಲಿ ಅಧಿಕಾರಿಗಳೇ 70 ಲಕ್ಷ ಮೌಲ್ಯದ ಕಾಪರ್ ಕೇಬಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮಂಗಳೂರು ದಕ್ಷಿಣ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಲಾಗಿದ್ದು, BSNL ಅಸಿಸ್ಟೆಂಟ್ ಆಫೀಸ್ ಸೂಪರಿಂಟೆಂಡೆಂಟ್ ತನ್ವೀರ್ ಪಾಷಾ(50), ಟೆಲಿಕಾಂ ಟೆಕ್ನಿಶಿಯನ್ ಕೆ.ಕೆ.ಚಾಮಿ(59) ಹಾಗೂ L&T ಕಂಪನಿ ಕೇಬಲ್ ಜಾಯಿಂಟರ್ ಡಿ.ಮಂಜುನಾಥ್ ಬಂಧಿತರಾಗಿದ್ದಾರೆ. ಆರೋಪಿಗಳಿಂದ 2.5 ಲಕ್ಷ ರೂ. ಮೌಲ್ಯದ ಕಾಪರ್ ಕೇಬಲ್ ಮತ್ತು 10 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಉಂಡ ಮನೆಗೇ ಕನ್ನ ಹಾಕಿದವರೀಗ ಕಂಬಿ ಹಿಂದೆ ಸೇರಿದ್ದಾರೆ.
ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ಆರೋಪ
ಎಜುಕೇಷನ್ ಟ್ರಸ್ಟ್ಗೆ ಹಣದ ಸಹಾಯ ಮಾಡುವ ನೆಪದಲ್ಲಿ ವಂಚನೆ ನಡೆಸಿದ ಆರೋಪ ಹಿನ್ನೆಲೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಒಟ್ಟು 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. CSR ಫಂಡ್ನಲ್ಲಿ ಬರೋಬ್ಬರಿ 100 ಕೋಟಿ ನೀಡುವುದಾಗಿ ಬೆಂಗಳೂರಿನ ಹೆಣ್ಣೂರಿನಲ್ಲಿರುವ ಖಾಸಗಿ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಯೋರ್ವರಿಗೆ ನಂಬಿಸಿದ್ದ ಆರೋಪಿಗಳು, ಹಣ ರಿಲೀಸ್ ಮಾಡುವ ನೆಪದಲ್ಲಿ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿ ಪಡೆದು ವಂಚಿಸಿರೋದಾಗಿ ದೂರುದಾರೆ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.















