ಒಡಿಶಾ: ಬ್ರಹ್ಮಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಂಧಮಲ್ ಜಿಲ್ಲೆಯ 22 ವರ್ಷದ ಮಹಿಳೆಯೊಬ್ಬರು ಅಪರೂಪದ ಸಯಾಮಿ ಅವಳಿಗೆ ಜನ್ಮ ನೀಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಸ್ಪತ್ರೆಯ ವೈದ್ಯರು, ‘ಸಯಾಮಿ ಅವಳಿ ಗಂಡು ಮಕ್ಕಳು ಜನಿಸಿವೆ. ಈ ಮಕ್ಕಳಿಗೆ ಎರಡು ತಲೆಗಳು, ಎರಡು ಕುತ್ತಿಗೆ, ಒಂದು ಸೊಂಟ, ಎರಡು ಬೆನ್ನುಹುರಿ, ಒಂದೇ ಹೃದಯ, ಯಕೃತ್ತು ಹಾಗೂ ಒಂದು ದೇಹವಿದೆ. ಹುಟ್ಟಿದಾಗ 2.25 ಕೆ.ಜಿ ತೂಕವಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ತಿಳಿಸಿದ್ದಾರೆ.
ಇದನ್ನು ವೈದ್ಯಕೀಯವಾಗಿ ‘ಡೈಸೆಫಾಲಿಕ್ ಪ್ಯಾರಾಪಾಗಸ್’ ಎಂದು ಕರೆಯಲಾಗುತ್ತದೆ. ಜನಿಸುವ ಪ್ರತಿ 3 ಲಕ್ಷ ಮಕ್ಕಳಲ್ಲಿ ಒಂದು ಮಾತ್ರ ಇಂತಹ ಸ್ಥಿತಿಯಲ್ಲಿ ಜನಿಸುತ್ತದೆ. ಸದ್ಯ ಮಕ್ಕಳಿಗೆ ತೀವ್ರ ಉಸಿರಾಟದ ತೊಂದರೆ ಇದ್ದು, ಎನ್ಐಸಿಯು ಘಟಕದಲ್ಲಿ ಇರಿಸಲಾಗಿದೆ. ಇವರು ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ‘ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಲು ವಿಶೇಷ ವೈದ್ಯರ ತಂಡವನ್ನು ರಚಿಸಿದ್ದೇವೆ’ ಎಂದು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕರಾದ ಡಾ. ಸುಚೇತಾ ದಾಸ್ ತಿಳಿಸಿದ್ದಾರೆ.
ಈ ಅಪರೂಪದ ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಕೂಲಿ ಕಾರ್ಮಿಕರಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಮೂಲಕ ಮಕ್ಕಳು ಜನಿಸಿದ್ದಾರೆ. ‘ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಭ್ರೂಣದ ಅಸಹಜ ವಿಭಜನೆಯಿಂದಾಗಿ ಇಂತಹ ಅಪರೂಪದ ಪ್ರಕರಣ ಸಂಭವಿಸುತ್ತದೆ’ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.










