ಗ್ವಾಟೆಮಾಲಾ ದೇಶದಲ್ಲಿ ಶವಪೆಟ್ಟಿಗೆಯಲ್ಲಿಟ್ಟಿದ್ದ 15 ವರ್ಷದ ಬಾಲಕಿಯೊಬ್ಬಳು ಶವಪೆಟ್ಟಿಗೆಯಿಂದ ಎಚ್ಚರಗೊಂಡ ಘಟನೆ ವರದಿಯಾಗಿದೆ. ಶವಪೆಟ್ಟಿಗೆಯಿಂದ ಬಾಲಕಿ ಎದ್ದು ಕುಳಿತುಕೊಳ್ಳುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, 15 ವರ್ಷ ದಯುಲೇಡಿ ಎಂಬ ಬಾಲಕಿ ತಂದೆಯೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆಗ ಆಕೆಯ ತಂದೆ, ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ನಾಡಿಮಿಡಿತ ಮತ್ತು ಉಸಿರಾಟ ಪರಿಶೀಲಿಸಿ ಮೃತಪಟ್ಟಿದ್ದಾಳೆಂದು ಭಾವಿಸಿದ್ದಾರೆ. ಯಾವುದೇ ವೈದ್ಯಕೀಯ ತಪಾಸಣೆ ಅಥವಾ ಸಾವಿನ ಪ್ರಮಾಣಪತ್ರ ಇಲ್ಲದೆಯೇ ಆಕೆ ತೀರಿಕೊಂಡಿದ್ದಾಳೆಂದು ಭಾವಿಸಿದ್ದ ಕುಟುಂಬಸ್ಥರು, ಶವಪೆಟ್ಟಿಗೆಯೊಳಗೆ ಮಲಗಿಸಿದ್ದರು. ಕುಟುಂಬಸ್ಥರು ಬಾಲಕಿಯ ಅಂತ್ಯಕ್ರಿಯೆಗೆ ಸಿದ್ಧತೆಮಾಡಿಕೊಳ್ಳುತ್ತಿದ್ದರು. ಬಂಧು-ಮಿತ್ರರು ಮನೆಗೆ ಬಂದಿದ್ದರು. ಬಾಲಕಿಯನ್ನು ಶವಪೆಟ್ಟಿಗೆಗೆ ಹಾಕಿ ಅದಾಗಲೇ 8 ಗಂಟೆ ಕಳೆದಿತ್ತು. ಅಂತ್ಯಕ್ರಿಯೆಯ ಇತರ ಕಾರ್ಯಕ್ರಮ ನಡೆಯುತ್ತಿದ್ದಾಗ ಬಾಲಕಿಯ ತಾಯಿ ಗಾಜಿನ ಶವಪೆಟ್ಟಿಗೆಯಲ್ಲಿದ್ದ ಮಗಳು ಚಲಿಸುತ್ತಿರುವುದನ್ನು ಗಮನಿಸಿ, ಹತ್ತಿರ ಹೋದರು. ಇದ್ದಕ್ಕಿದ್ದಂತೆ ಬಾಲಕಿ ಶವಪೆಟ್ಟಿಗೆಯಿಂದ ಎದ್ದು ಕುಳಿತುಮಾತನಾಡಲು ಪ್ರಾರಂಭಿಸಿದಳು. ಇದನ್ನು ನೋಡಿ ಅಲ್ಲಿದ್ದ ಜನರು ಆಶ್ಚರ್ಯ ಮತ್ತು ಆಘಾತಕ್ಕೊಳಗಾದರು.
ತಕ್ಷಣವೇ ಬಾಲಕಿಯನ್ನು ಶವಪೆಟ್ಟಿಗೆಯಿಂದ ಹೊರಕರೆತಂದು ಉಪಚರಿಸಲಾಗಿದೆ. ಪ್ರಸ್ತುತ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರದಿಯಾಗಿದೆ. ಕಾರಿನಲ್ಲಿದ್ದ ಆ ಕ್ಷಣಗಳನ್ನು ನೆನಪಿಸಿಕೊಂಡು ಮಾತನಾಡಿರುವ ಬಾಲಕಿ, ‘ನನ್ನ ಎದೆಯಲ್ಲಿ ವಿಪರೀತ ನೋವುಂಟಾಗಿತ್ತು. ಎದೆ ಭಾರವೆನಿಸುತ್ತಿತ್ತು, ನಂತರ ಪ್ರಜ್ಞೆ ತಪ್ಪಿದ್ದೆ’ ಎಂದಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಂದೆ, ‘ಅವಳು ಉಸಿರಾಡುತ್ತಿರಲಿಲ್ಲ, ನಾಡಿಬಡಿತವೂ ಇರಲಿಲ್ಲ. ಹೀಗಾಗಿ, ಆಕೆ ಮೃತಪಟ್ಟಿದ್ದಾಳೆಂದು ಭಾವಿಸಿದ್ದೆ. ಅದೇ ನಂಬಿಕೆಯ ಮೇಲೆ ಕುಟುಂಬದವರಿಗೂ ಹೇಳಿದ್ದೆ’ ಎಂದಿದ್ದಾರೆ.










