‘ನನಗೆ 75 ವರ್ಷವಾಯಿತು, ಸ್ವಲ್ಪ ಕೂತ್ಕೋತೀನಿ ಬಿಡಿ” | “ನನ್ನ ವಯಸ್ಸಿಗೆ ತಕ್ಕ ಪಾತ್ರ ಸಿಗುವುದು ಕಷ್ಟ” | ಜೈಲರ್‌ 2 ವೇದಿಕೆಯಲ್ಲಿ ರಜನೀಕಾಂತ್‌ ಫಿಲಾಸಫಿ!!

ವೇದಿಕೆ ಯಾವುದೇ ಇರಲಿ ಸೂಪರ್‌ಸ್ಟಾರ್ ರಜನಿಕಾಂತ್ ಸೊಗಸಾಗಿ ಮಾತನಾಡುತ್ತಾರೆ. ತನ್ನನ್ನು ತಾನು ಗೇಲಿ ಮಾಡಿಕೊಳ್ಳುತ್ತ, ಕೊಂಚ ಫಿಲಾಸಫಿ ಬೆರೆಸುವ ಅವರ ಮಾತುಗಳಿಗೇ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಅ.15ರಂದು ಬಿಡುಗಡೆಯಾಗುತ್ತಿರುವ ‘ಜೈಲರ್ 2’ ಚಿತ್ರದ ವೇದಿಕೆಯಲ್ಲಿ ಅವರು ಆಡಿದ ಮಾತುಗಳು ಇಲ್ಲಿವೆ ನೋಡಿ…

Advertisement

ಸೀಕ್ವೆಲ್‌ಗಳನ್ನು ನಾನು ಅಷ್ಟಾಗಿ ಪ್ರೋತ್ಸಾಹಿಸುವುದಿಲ್ಲ. ಸೀಕ್ವೆಲ್ ಅಂದಕೂಡಲೇ ಕ್ರಿಯೇಟಿವಿಟಿ ಕಡಿಮೆಯಾಗಿದೆ, ಹಳೆಯ ಸರಕಿಗೇ ಉಪ್ಪು-ಖಾರ ಹಾಕಿ ಮತ್ತೆ ಮಾಡುತ್ತಾರೆ ಎಂಬ ಭಾವನೆ ನನಗಿತ್ತು. ಈ ಹಿಂದೆ ‘ಬಾಷಾ’, ‘ಪೆಟ್ಟಾ’ ಸೀಕ್ವೆಲ್ ಐಡಿಯಾ ಹೇಳಿದಾಗ ಆಸಕ್ತಿ ಬರಲಿಲ್ಲ. ಆದರೆ ನೆಲ್ಸನ್ ಕಥೆಯಲ್ಲಿ ‘ಜೈಲರ್’ ಓಟಿಟಿಯಲ್ಲಿ ಮತ್ತೊಮ್ಮೆ ನೋಡುವಾಗ ಹಲವು ದಾರಿಗಳನ್ನು ಉಳಿಸಿರುವುದು ಗಮನಕ್ಕೆ ಬಂತು. ‘ನಮ್ಮ ಹಿಂದೆ ಒಂದು ದೊಡ್ಡ ಗುಂಪಿದೆ’ ಎಂಬ ವರ್ಮನ್ ಹೇಳುವ ಮಾತು, ಜೈಲರ್ ಬಳಿಯ ಕಂಟೇನರ್‌ಗಳು ಕತೆಗೆ ಅಡಿಪಾಯ ಹಾಕಿದ್ದವು. ನೆಲ್ಸನ್‌ಗೆ ಈ ಐಡಿಯಾ ಹೊಳೆದು ಫೋನ್ ಮಾಡಿದಾಗ, ಅವರು ಮತ್ತೊಬ್ಬ ದೊಡ್ಡ ಹೀರೋ ಜೊತೆ ಸಿನಿಮಾ ಮಾಡಲು ಮಾತುಕತೆ ನಡೆಸಿದ್ದರು. ಐಡಿಯಾ ಹೇಳಿದಾಗ, ‘ಬೇಡ ಸರ್, ಮತ್ತೆ ಅದೇ ಮಾಡಿ ಹಿಂಡಿ ಹಿಪ್ಪೆ ಮಾಡುವುದು ಬೇಡ’ ಎಂದರು. ಒಂದು ತಿಂಗಳ ಬಳಿಕ ಅವರೇ, ‘ಸರ್, ಯೋಚಿಸಿದೆ. ‘ಜೈಲರ್ 2’ ಮಾಡಿದರೆ ಚೆನ್ನಾಗಿರುತ್ತದೆ’ ಎಂದರು. ಜೈಲರ್ ಪಾತ್ರವು ಈ ಐಡಿಯಾಕ್ಕೆ ಮುಖ್ಯ ಕಾರಣ ಜೈಲರ್ ಪಾತ್ರ. ನನಗೆ ಈಗ 75 ವರ್ಷ. ವಯಸ್ಸಿಗೆ ತಕ್ಕ ಪಾತ್ರ ಸಿಗುವುದು ಕಷ್ಟ. ಈ ವಯಸ್ಸಿನಲ್ಲಿ ಒಳ್ಳೆಯ ಪಾತ್ರದೊಂದಿಗೆ ಕೆರಿಯರ್ ಮುಂದುವರಿಸುವುದೂ ಸುಲಭವಲ್ಲ. ದೊಡ್ಡ ನಟರಿಗೆ ಸರಿಯಾದ ಕಥೆ, ಪಾತ್ರ, ನೆಲ್ಸನ್‌ರಂತಹ ನಿರ್ದೇಶಕ, ಸನ್ ಪಿಕ್ಚರ್ಸ್‌ನಂತಹ ನಿರ್ಮಾಣ ಸಂಸ್ಥೆ ಸಿಗದಿದ್ದರೆ ನಟನೆ ಮುಂದುವರಿಸುವುದು ಕಷ್ಟ.

Advertisement

ಸೀಕ್ವೆಲ್‌ನ ಕಷ್ಟ ಕಣಕ್ಕಿಳಿದ ಮೇಲೆಯೇ ಗೊತ್ತಾಗುತ್ತದೆ. ಬೃಹತ್ ಭೂತದಂತೆ ಮೊದಲ ಭಾಗದ ಬಳಿಕ ಎರಡನೇ ಭಾಗಕ್ಕೆ ಬಂದಾಗ ಹಿಂದಿನ ಚಿತ್ರವೇ ಎದುರು ನಿಲ್ಲುತ್ತದೆ. ಅದಕ್ಕೆ ಸರಿಸಮಾನವಾಗಿ ಅಥವಾ ಮಿಗಿಲಾಗಿ ಕೊಡಬೇಕು. ಚಾಲೆಂಜ್ ಜೀವನದಲ್ಲಿ ಇರಬೇಕು. ಸುಮ್ಮನೆ ಓಡಿದರೆ ಪ್ರಯೋಜನವಿಲ್ಲ. ವಿಲನ್ ಪಾತ್ರಕ್ಕೆ ಮಿಥುನ್ ಚಕ್ರವರ್ತಿ ಅವರನ್ನು ಕೇಳಿದಾಗ, ‘ರಜನಿ ಎದುರು ವಿಲನ್ ಆಗಿ ನಟಿಸಬೇಕಾ? ಅವನು ನನ್ನ ಆಪ್ತ ಗೆಳೆಯ. ಅವನ ಕೈಯಲ್ಲಿ ಹೊಡೆತ ತಿನ್ನಬೇಕಾ? ಹೋಗ್ರಯ್ಯ!’ ಎಂದು ಕಳುಹಿಸಿಬಿಟ್ಟಿದ್ದರಂತೆ. ಬಾಂಬೆಯಲ್ಲಿ ಸಿಕ್ಕಾಗ ನನ್ನನ್ನು ಕೇಳಿದರು. ‘ನೀವು ಮಾಡಿದರೆ ಚೆನ್ನಾಗಿರುತ್ತದೆ’ ಎಂದೆ. ‘ಒಂದು ಷರತ್ತು, ನೀನು ನನಗೆ ಹೊಡೆಯಬಾರದು, ನನ್ನ ಮೇಲೆ ಶೂಟ್ ಮಾಡಬಾರದು’ ಎಂದರು. ಡೈರೆಕ್ಟರ್ ಬಳಿ ಹೇಳುತ್ತೇನೆ ಎಂದೆ. ಹಾಗೆ ಅವರೂ ಬಂದರು. ಎಸ್.ಜೆ. ಸೂರ್ಯ ನಟ ರಾಕ್ಷಸ. ನೆಲ್ಸನ್ ಓಕೆ ಎಂದರೂ ಅವರು ಬಿಡುತ್ತಿರಲಿಲ್ಲ. ‘ಸರ್, ಒನ್ ಮೋರ್ ಸರ್, ಇನ್ನೊಂದು ಟೇಕ್ ಸರ್’ ಎಂದು 8, 10, 12 ಟೇಕ್ ತೆಗೆಯುತ್ತಿದ್ದರು. ನಾವೂ, ರಮ್ಯಾ ಕೃಷ್ಣನ್ ಅವರೂ ನಿಂತಿರಬೇಕು. ಕೊನೆಗೆ, ‘ನನಗೆ 75 ವರ್ಷವಾಯಿತು, ಸ್ವಲ್ಪ ಕೂತ್ಕೋತೀನಿ ಬಿಡಿ’ ಎಂದರೂ ಬಿಡುತ್ತಿರಲಿಲ್ಲ. ಅವರ ಡೆಡಿಕೇಷನ್ ನೋಡಿ ದಂಗಾದೆ.
‘ಜೈಲರ್ 2’ರಲ್ಲಿ ಮಿಸ್ಸಿಂಗ್ ಎಂದರೆ ತಮನ್ನಾ. ನೆಲ್ಸನ್‌ಗೆ ಅವರ ಒಂದು ಹಾಡು ಇಡೋಣ ಎಂದು ಹೇಳಿದೆ. ‘ನಿಮಗೆ ಇಷ್ಟ ಎಂದು ಇಡಲು ಸಾಧ್ಯವಿಲ್ಲ ಸರ್’ ಎಂದರು. ‘ನನಗೆ ಇಷ್ಟ ಎಂದು ಮಾಡಿದ್ದರೆ 40 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಹೋಗಿಬಿಡುತ್ತಿದ್ದೆ. ಜನರಿಗೆ ಏನು ಇಷ್ಟವೋ ಅದನ್ನು ಮಾಡಿದ ಕಾರಣಕ್ಕೇ ಇಲ್ಲಿಯವರೆಗೆ ಬಂದಿದ್ದೇನೆ’ ಎಂದೆ.
ನನಗೆ 75-76 ವರ್ಷವಾಗುತ್ತಿದೆ. ಇನ್ನೂ ಹೇಗೆ ಹೀರೋ ಆಗಿ ನಟಿಸುತ್ತಿದ್ದೀರಿ ಎಂದು ಹಲವರು ಕೇಳುತ್ತಾರೆ. ನನ್ನನ್ನು ಬದುಕಿಸುತ್ತಿರುವುದು ಅಭಿಮಾನಿಗಳು. ನೀವಿಲ್ಲದಿದ್ದರೆ ನಾನೇನೂ ಅಲ್ಲ, ಒಂದು ಹುಲ್ಲಿನ ಕಡ್ಡಿಯಷ್ಟೇ. ನಿಮ್ಮ ಪ್ರೀತಿ, ಬೆಂಬಲದಿಂದಲೇ ಸಿನಿಮಾ ಸಾಧ್ಯವಾಗುತ್ತಿದೆ ಎಂದು ಮಾತನಾಡಿದರೆಂದು ಮೂಲಗಳು ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page