ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ರಾಜಕಾರಣಿಗಳು, ಸಾಮಾಜಿಕ ಚಿಂತಕರು, ಸರ್ವಧರ್ಮದ ಹಿರಿಯರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಹಲವಾರು ಮನವಿಗಳು ಸರ್ಕಾರದಲ್ಲಿ ಸ್ವೀಕೃತಗೊಂಡಿರುತ್ತವೆ. ಈ ಕುರಿತು ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಗಣನೆಗೆ ತೆಗೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಕಟಣೆಯಲ್ಲಿರುವಂತೆ, ಭಾರತ ಸರ್ಕಾರದ ಗೃಹ ಮಂತ್ರಾಲಯದ ಪತ್ರ ಸಂಖ್ಯೆ: 130/53-Public. ದಿನಾಂಕ: 11.09.1953ರ ಮಾರ್ಗಸೂಚಿಗಳನ್ವಯ ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಸೆಕ್ಷನ್ 4(44) ರಡಿ ಪ್ರದತ್ತವಾದ ಅಧಿಕಾರದನ್ವಯ ಮತ್ತು ಈ ಸಂಬಂಧ ಅದನ್ನು ಸಬಲಗೊಳಿಸುವ ಇತರ ಎಲ್ಲಾ ಅಧಿಕಾರಗಳನ್ನು ಚಲಾಯಿಸಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರಿಂದ ಯಾವುದೇ ಸಲಹೆ/ಅಭಿಪ್ರಾಯಗಳು ಸ್ವೀಕೃತವಾದಲ್ಲಿ ಅವುಗಳನ್ನು ಪರಿಶೀಲಿಸಲಾಗುವುದು.
ಈ ಕೆಳಗಿನ ಅನುಸೂಚಿಯಲ್ಲಿ ತಿಳಿಸಿರುವಂತೆ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ/ಸಲಹೆಗಳನ್ನು ಈ ಕೆಳಕಂಡ ವಿಳಾಸಗಳಿಗೆ ಲಿಖಿತ ರೂಪದಲ್ಲಿ ಅಥವಾ ಇ-ಮೇಲ್ ಮೂಲಕ ಈ ಅಧಿಸೂಚನೆಯು ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 30 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ.
i) ಮಾನ್ಯ ಮುಖ್ಯಮಂತ್ರಿಯವರ ಸಚಿವಾಲಯ, ಕೊಠಡಿ ಸಂಖ್ಯೆ: 235, 2ನೇ ಮಹಡಿ ವಿಧಾನಸೌಧ, ಬೆಂಗಳೂರು -560001- e-mail: cm.kar@nic.in
ii) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 711, 7ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು -560001 – e-mail : Prs.revenue@gmail.com.
iii) ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ ಪ್ರಜಾಸೌಧ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇಂದ್ರ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಪಡೀಲು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ -575007 – e-mail: dc.mnglr@gmail.com
ಈ ಮೇಲಿನ ವಿಷಯವನ್ನು ಸರ್ಕಾರ ಪ್ರಟಟಣೆಯಲ್ಲಿ ತಿಳಿಸಿದ್ದು, ತುಳುನಾಡಿನ ಜನತೆ ತಮ್ಮ ಜಿಲ್ಲೆಗೆ ನೂತನ ಹೆಸರು ಸಿಗುವ ಸಂಭ್ರಮದಲ್ಲಿದ್ದಾರೆ.












