ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ದುಬಾರೆ ಶಿಬಿರದ ಪ್ರಶಾಂತ ಆಯ್ಕೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅರಮನೆ ಮಂಡಳಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆನೆ ಹೆಸರು ಘೋಷಿಸಿದರು.
ಅ.21 ರ ವಿಜಯ ದಶಮಿ ದಿನ ಅದ್ದೂರಿ ಜಂಬೂಸವಾರಿ ನಡೆಯಲಿದೆ. ಕಳೆದ 6 ವರ್ಷ ಅಂಬಾರಿ ಹೊತ್ತಿದ್ದ ‘ಅಭಿಮನ್ಯು’ವನ್ನು ವಯಸ್ಸಿನ ಕಾರಣಕ್ಕಾಗಿ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಹೊರಗಿಡಲಾಯಿತು. ಹೀಗಾಗಿ ಈ ಬಾರಿ ಅಂಬಾರಿ ಹೊರಲು ಹೊಸ ಆನೆ ಆಯ್ಕೆಯ ಬಗ್ಗೆ ಕುತೂಹಲ ಗರಿಗೆದರಿತ್ತು. ಪ್ರಶಾಂತ, ಧನಂಜಯ, ಸುಗ್ರವ, ಮಹೇಂದ್ರ, ಏಕಲವ್ಯ ನಡುವೆ ಆಯ್ಕೆಗೆ ಸ್ಪರ್ಧೆ ಏರ್ಪಟ್ಟಿತ್ತು. ಮಹೇಂದ್ರ ಎರಡು ಬಾರಿ ಮರದ ಅಂಬಾರಿ ಹೊತ್ತು ಬನ್ನಿಮಂಟಪ ಸೇರುವಲ್ಲಿ ವಿಫಲವಾದ ಕಾರಣ ಅದನ್ನು ಆಯ್ಕೆಯಿಂದ ಹೊರಗಿಡಲಾಗಿತ್ತು. ಇದೀಗ ಪ್ರಶಾಂತ ಅಂಬಾರಿ ಹೊರುವ ಆನೆಯಾಗಿ ಆಯ್ಕೆಯಾಗಿದ್ದಾನೆ. ಧನಂಜಯ ಮೀಸಲು ಅಂಬಾರಿ ಆನೆಯಾಗಿ, ಅಭಿಮನ್ಯು ನಿಶಾನೆ, ಗೋಪಿ ನೌಫತ್ ಆನೆ, ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳಾಗಿ ಆಯ್ಕೆಯಾಗಿವೆ. ಉಳಿದ ಆನೆಗಳು ಸಾಲಾನೆಗಳಾಗಿ ಭಾಗವಹಿಸಲಿವೆ.
ಸಚಿವ ಬಸವಂತಪ್ಪ, ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತ ರೆಡ್ಡಿ,ಅರಣ್ಯ ಇಲಾಖೆ ಸಿಎಫ್ ರವಿಶಂಕರ್, ಡಿಸಿಎಫ್ ಐ.ಬಿ.ಪ್ರಭುಗೌಡ, ಆರ್.ಎಫ್.ಒ ಯಶ್ಮಾ ಮಾಚಮ್ಮ ಇದ್ದರು.











