ಹೊಸದಿಲ್ಲಿ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿ ಅದನ್ನು 10 ಲಕ್ಷ ರೂ.ಗೆ ಮಾರಾಟ ಮಾಡಿ ಅದರ ಪುರಾವೆಗಳನ್ನು ನೀಡಿದರೆ ನಾವು ನಿಮಗೆ ಪಿಎಚ್‌ಡಿ ಪದವಿ ನೀಡುತ್ತೇವೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ರೋಪಡ್ ಘೋಷಿಸಿದೆ.
ದೇಶದಲ್ಲೇ ಮೊದಲ ಬಾರಿಗೆ ಐಐಟಿ ರೋಪಡ್, ಸಾಂಪ್ರದಾಯಿಕ ಪಿಎಚ್‌ಡಿ ಪ್ರಬಂಧ ಬದಿಗಿಟ್ಟು ಹೊಸ ಪಿಎಚ್‌ಡಿ ಮಾದರಿಯನ್ನು ಪರಿಚಯಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಐಐಟಿ ರೋಹರ್ ನಿರ್ದೇಶಕ ಪ್ರೊ. ರಾಜೀವ್ ಅಹುಜಾ, ಸಂಶೋಧನಾ ವಿದ್ಯಾರ್ಥಿಗಳು ವರ್ಷಗಟ್ಟಲೆ ಪ್ರಬಂದವನ್ನು ಬರೆಯುವ ಅಗತ್ಯವಿಲ್ಲ. ಬದಲಿಗೆ ನೈಜ ಜಗತ್ತಿನ ಕೈಗಾರಿಕಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದು ಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸ್ಟಾರ್ಟ್‌ಅಪ್ ಸ್ಥಾಪನೆ ಅಥವಾ ಪೇಟೆಂಟ್ ಪಡೆಯುವುದನ್ನು ತಮ್ಮ ಪಿಎಚ್‌ಡಿಯ ಮುಖ್ಯ ಗುರಿಯಾಗಿರಿಸಿಕೊಳ್ಳಬಹುದು ಎಂದರು. ಈ ವೇಳೆ ಸಂಶೋಧನಾ ವಿದ್ಯಾರ್ಥಿಗಳು ತಯಾರಿಸಿದ ಸ್ಟಾರ್ಟ್‌ಅಪ್‌ನಿಂದ 10ಲಕ್ಷ ರೂ. ಗಳಿಸಿದರೆ ಅವರಿಗೆ ಪಿಎಚ್‌ಡಿ ಪದವಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಚೀನದಲ್ಲಿ ಈ ಮಾದರಿಯನ್ನು ಅಳವಡಿಸಿಕೊಂಡಿದೆ.














