ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕಳೆದ 36 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿ,ಇತಿಹಾಸ ಪರಂಪರೆಯನ್ನು ಭಾರತದಾದ್ಯಂತ ಕನ್ನಡ ಜನತೆಗೆ ತಲುಪಿಸುವ ಉದ್ದೇಶದಿಂದ ಕೇರಳ,ಕರ್ನಾಟಕ ಹಾಗೂ ಅಖಿಲ ಭಾರತ ಮತ್ತು ಆನಿವಾಸಿ ಭಾರತೀಯ ಕನ್ನಡಿಗರು,ಕಲಾವಿದರು, ಸಾಹಿತಿಗಳನ್ನು ಆಮಂತ್ರಿಸಿ ರಾಜ್ಯ, ರಾಷ್ಟ್ರೀಯ,ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕೃತಿಕ ವಿನಿಮಯಕ್ಕಾಗಿ ಕಾಸರಗೋಡು ಮೀಪುಗುರಿ- ಪಾರೆಕಟ್ಟೆ- ಕನ್ನಡ ಗ್ರಾಮ ರಸ್ತೆಯ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಶನಿವಾರ ಮತ್ತು 29 ಆದಿತ್ಯವಾರದಂದು ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026, ಕೇರಳ- ಕರ್ನಾಟಕ ಉತ್ಸವ , ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು ಏರ್ಪಡಿಸಲಾಗಿದೆಯೆಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಹೇಳಿದರು.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ, ಕೇರಳ- ಕರ್ನಾಟಕ ಉತ್ಸವವನ್ನು ಖ್ಯಾತ ಸಾಹಿತಿ, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ ಎಂ ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದಾರೆ. ಕೇರಳ ಕರ್ನಾಟಕದ ಸಚಿವರು ,ಲೋಕಸಭಾ ಸದಸ್ಯರು, ಶಾಸಕರು, ಕರ್ನಾಟಕದ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕರ ಕುಶಲ, ವಸ್ತು, ಚಿತ್ರಕಲಾ ಮೇಳ ,ಪುಸ್ತಕ ಮೇಳ, ಆಹಾರ ಮೇಳ, ಕೃಷಿ ಮೇಳ, ಮತ್ತು ಹೊಸ ಕೃತಿಗಳು, ಸ್ಮರಣ ಸಂಚಿಕೆ ಬಿಡುಗಡೆ, ಅಂತರ ರಾಜ್ಯಮಟ್ಟದ ಮಾಧ್ಯಮ ಗೋಷ್ಠಿ, ಅಂತರರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ, ಅಂತರರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಮತ್ತು ಕೇರಳ ರಾಜ್ಯ ಘಟಕದ ಆಶ್ರಯದಲ್ಲಿ ಪ್ರಥಮ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದಲ್ಲಿ ಅಂತರರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿ, ಅಂತರ ರಾಜ್ಯಮಟ್ಟದ ಕಾಲೇಜು ವಿದ್ಯಾರ್ಥಿ ಕವಿಗೋಷ್ಠಿ, ಮಕ್ಕಳ ಸಾಹಿತ್ಯ ಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರಕಾರದ ವಿವಿಧ ಅಕಾಡೆಮಿಗಳ ಸಹಯೋಗದಲ್ಲಿ ಅಂತರ ರಾಜ್ಯ ಮಟ್ಟದ ಬಹು ಭಾಷಾ ಬಾಂಧವ್ಯ ಗೋಷ್ಠಿಯನ್ನು ಏರ್ಪಡಿಸಲಾಗಿದೆ.8 ರಾಜ್ಯಗಳ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡು ಗಡಿನಾಡು- ಹೊರನಾಡು, ಅನಿವಾಸಿ ಭಾರತೀಯ ಕನ್ನಡಿಗರು -ಕನ್ನಡ ಸಂಘಟನೆಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ,ಕರ್ನಾಟಕ ಸರಕಾರ ಬೆಂಗಳೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ನಿರ್ದೇಶಕರು,ಅಧ್ಯಕ್ಷರು, ಕಾರ್ಯದರ್ಶಿಗಳು, ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಕೇರಳ – ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು, ವಿವಿಧ ವಿಭಾಗದ ಮುಖ್ಯಸ್ಥರು ಆಗಮಿಸಲಿದ್ದಾರೆ. ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧ ಕಲಾ ಪ್ರಕಾರಗಳ ಪ್ರದರ್ಶನ ಹಾಗೂ ಪ್ರಸಿದ್ಧ ಚಿತ್ರ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ, ಪ್ರಾತ್ಯಕ್ಷಿಕೆ ನಡೆಯಲಿದೆ. ಸಮೂಹ ನೃತ್ಯ, ಜಾನಪದ ನೃತ್ಯ, ಸುಗಮ ಸಂಗೀತ,ದಾಸ ಸಂಕೀರ್ತನೆ,ಜಾನಪದ , ಭಾವಗೀತೆ, ಚಲನಚಿತ್ರ ಗೀತಾ ಗಾಯನ,ದೇಶಭಕ್ತಿ ಗೀತೆಗಳ ಸಮೂಹ ಗಾಯನ ನಡೆಯಲಿದೆ. ಕರಾವಳಿ ರತ್ನ ಪ್ರಶಸ್ತಿ, ಕೇರಳ -ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ ,ವಿವಿಧ ಕ್ಷೇತ್ರದ ಸಾಧಕರಿಗೆ ಕರಾವಳಿ ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ, 14 ಸಮುದಾಯಗಳ ಸಾಧಕರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕೇರಳ- ಕರ್ನಾಟಕ ಉತ್ಸವದಲ್ಲಿ ಅಂತರ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೇರಳ, ಕರ್ನಾಟಕ ರಾಜ್ಯದ ವಿಶೇಷ ಜನಪದ ಕಲೆ, ಭರತನಾಟ್ಯ ಜಾನಪದ ನೃತ್ಯ, ನೃತ್ಯ ರೂಪಕ, ಐತಿಹಾಸಿಕ, ಚಾರಿತ್ರಿಕ,ಸಾಮಾಜಿಕ ನಾಟಕ ಹಾಗೂ ವಿವಿಧ ಜಾನಪದ ಕಲೆಗಳು ಕನ್ನಡ ಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ. ಅಖಿಲ ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯು ಕಾಸರಗೋಡಿನಲ್ಲಿ ಪ್ರತಿಬಿಂಬಿಸಲಿದೆ. ಕಾಸರಗೋಡು ಕನ್ನಡ ಗ್ರಾಮದಲ್ಲಿ ವಿಶೇಷವಾಗಿ ನಮ್ಮೂರ ಕನ್ನಡ ಜಾತ್ರೆ, ವೈದ್ಯಕೀಯ ತಪಾಸಣಾ ಶಿಬಿರ ,ವಸ್ತು ಪ್ರದರ್ಶನ, ವ್ಯಂಗ್ಯ ಚಿತ್ರ ಛಾಯಾಚಿತ್ರ, ಚಿತ್ರಕಲಾ ಮೇಳ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ವಿವಿಧ ಉದ್ಯಮ, ವ್ಯವಹಾರ ಬ್ಯಾಂಕಿಂಗ್, ಗ್ರಾಮೀಣಾಭಿವೃದ್ಧಿ,ಖಾದಿ, ಕೃಷಿ,ಗುಡಿ ಕೈಗಾರಿಕೆ, ಸ್ವ- ಉದ್ಯೋಗ ಸಂಸ್ಥೆಗಳಿಂದ ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರುತ್ತದೆ. ಗಡಿನಾಡಾದ ಕಾಸರಗೋಡಿನ ಕನ್ನಡ ಗ್ರಾಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು, ಕನ್ನಡಾಭಿಮಾನಿಗಳು, ವಿವಿಧ ಸಮುದಾಯದವರು, ಸಾಂಸ್ಕೃತಿಕ ರಾಯಭಾರಿಗಳು, ಕವಿಗಳು ,ಸಾಹಿತಿಗಳು, ಕಲಾವಿದರು, ಅಧ್ಯಾಪಕರು, ವಿದ್ಯಾರ್ಥಿಗಳು, ಕೃಷಿಕರು, ವಿವಿಧ ವ್ಯವಹಾರ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು, ಮಾಧ್ಯಮದವರು, ವಿವಿಧ ಕ್ಷೇತ್ರದ ಸಾಧಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಕೇರಳ – ಕರ್ನಾಟಕ ಮತ್ತು ಭಾರತದ ಇತರ ರಾಜ್ಯಗಳಿಂದ ಸುಮಾರು 300 ಕ್ಕೂ ಹೆಚ್ಚು ಪ್ರತಿನಿಧಿಗಳ ಸಾಂಸ್ಕೃತಿಕ ನಿಯೋಗವು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಗಲ್ಫ್ ರಾಷ್ಟ್ರ ವಿದೇಶಗಳ ಅನಿವಾಸಿ ಭಾರತೀಯ ಕನ್ನಡಿಗರು, ಕೇರಳ, ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ ಮತ್ತು ಕೇರಳ ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಶ್ರೀ ಶ್ರೀ ನಿಶ್ವಲಾನಂದ ಮಹಾ ಸ್ವಾಮಿಗಳು, ಮೂಡುಬಿದಿರೆಯ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ,ಶ್ರೀ ಶಂಕರಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ,ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ , ಮಾಣಿಲದ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ಮಠದ ಪೀಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪೀಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಆಗಮಿಸಿ ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇರಳ- ಕರ್ನಾಟಕ ಭವನಕ್ಕೆ ಭೂಮಿಪೂಜೆ- ಶಿಲಾನ್ಯಾಸವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶಿವರಾಮ ಕಾಸರಗೋಡು, ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ,ಪಾರೆಕಟ್ಟೆ -ಕನ್ನಡ ಗ್ರಾಮ ರಸ್ತೆ, ಕಾಸರಗೋಡು – 671121 ಮೊಬೈಲ್ : (9448572016, 9901951965) ವಿಳಾಸಕ್ಕೆ ಪತ್ರ ಬರೆಯುವ ಮೂಲಕ ಸಂಪರ್ಕಿಸಬಹುದು.














