ಮಂಗಳೂರು : ಧರ್ಮ ಶಿಕ್ಷಣ ನೀಡುವ ಪವಿತ್ರ ಸ್ಥಾನದಲ್ಲಿದ್ದ 40 ವರ್ಷ ವಯಸ್ಸಿನ ವಿವಾಹಿತ ಧರ್ಮಗುರು ಒಬ್ಬ, ತನಗಿಂತ ಅರ್ಧ ವಯಸ್ಸಿನ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಓಡಿಬಂದಿರುವ ವಿಲಕ್ಷಣ ಘಟನೆಯೊಂದು ಉತ್ತರ ಕನ್ನಡದ ಕುಮಟಾ ಮತ್ತು ಮಂಗಳೂರಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಅವರ 22 ವರ್ಷದ ಪುತ್ರಿ , ಸ್ಥಳೀಯ ಮದರಸಾಗೆ ಧರ್ಮ ಶಿಕ್ಷಣ ಕಲಿಯಲು ತೆರಳುತ್ತಿದ್ದರು. ಈ ಮದರಸಾದಲ್ಲಿ ಮಂಗಳೂರಿನ ಅಸೈಗೋಳಿ ನಿವಾಸಿಯಾದ ವಿವಾಹಿತ ಅಶ್ರಫ್ ಸಅದಿ (40) ಹಲವು ವರ್ಷಗಳಿಂದ ಧರ್ಮಗುರುವಾಗಿ ಸೇವೆ ಸಲ್ಲಿಸುತ್ತಿದ್ದ. ಪವಿತ್ರ ಧರ್ಮಬೋಧನೆ ಮಾಡುವ ನೆಪದಲ್ಲಿ ಅಶ್ರಫ್, ಯುವತಿ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾನೆ. ಕಳೆದ ಮೂರು ವರ್ಷಗಳಿಂದ ಇವರಿಬ್ಬರ ನಡುವೆ ನಿರಂತರ ಸಂಪರ್ಕವಿದ್ದು, ಅದು ಪ್ರೀತಿಯಾಗಿ ಬದಲಾಗಿತ್ತು.
ಅಶ್ರಫ್ ಸಅದಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರೆ. ಆದಾಗ್ಯೂ, ತನ್ನ ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು, ಯುವತಿಯ ತಲೆಯಲ್ಲಿ ಪ್ರೀತಿಯ ಭ್ರಮೆ ತುಂಬಿ ಆಕೆಯನ್ನು ತಮ್ಮತ್ತ ಸೆಳೆದಿದ್ದಾನೆ ಎಂದು ಯುವತಿಯ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ರಹಸ್ಯವಾಗಿ ನಿಖಾ (ಮದುವೆ) ಮಾಡಿಕೊಂಡು, ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅಶ್ರಫ್ ಯುವತಿಯನ್ನು ಮಂಗಳೂರಿನ ಅಸೈಗೋಳಿಯಲ್ಲಿರುವ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಮಗಳು ಕಾಣೆಯಾಗಿದ್ದನ್ನು ಕಂಡು ಕಂಗಾಲಾದ ಪೋಷಕರು ಆಕೆಯನ್ನು ಹುಡುಕಿಕೊಂಡು ಮಂಗಳೂರಿಗೆ ಆಗಮಿಸಿದ್ದರು. ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದಾಗ, ಪೊಲೀಸರು ಅಶ್ರಫ್ ಸಅದಿ ಹಾಗೂ ಯುವತಿನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.
ಠಾಣೆಯ ಆವರಣದಲ್ಲಿ ಯುವತಿಯ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಕಣ್ಣೀರಿಡುತ್ತಾ, ಆಕೆಗೆ ಬುದ್ಧಿಹೇಳಿ ಮನೆಗೆ ಹಿಂತಿರುಗುವಂತೆ ಎಷ್ಟೇ ಬೇಡಿಕೊಂಡರೂ ಯುವತಿ ಮಣಿಯಲಿಲ್ಲ. ಹೆತ್ತವರ ಆಕ್ರಂದನ, ಅಳಲು ಯಾವುದಕ್ಕೂ ಕ್ಯಾರೇ ಎನ್ನದ ಆಕೆ, ವಾಪಸ್ ಮನೆಗೆ ಹೋಗಲು ಸಂಪೂರ್ಣವಾಗಿ ನಿರಾಕರಿಸಿದಳು.
ಪೊಲೀಸ್ ವಿಚಾರಣೆ ವೇಳೆ ಯುವತಿಯು, ತಾನು ಸಪ್ತಪದಿ ತುಳಿದಿರುವ ಧರ್ಮಗುರು ಅಶ್ರಫ್ ಜೊತೆಯೇ ಬಾಳುವುದಾಗಿ ಪಟ್ಟು ಹಿಡಿದಳು. ತಾನು ಸ್ವ ಇಚ್ಛೆಯಿಂದ ಬಂದಿರುವುದಾಗಿ ಪೊಲೀಸರಿಗೆ ಅಧಿಕೃತ ಹೇಳಿಕೆ ದಾಖಲಿಸಿ, ಹೆತ್ತವರನ್ನು ತೊರೆದು ಧರ್ಮಗುರುವಿನ ಜೊತೆಯೇ ಹೆಜ್ಜೆ ಹಾಕಿದಳು.
ಕಣ್ಣೆದುರೇ ಮಗಳು ತಮಗಲ್ಲದವನ ಜೊತೆ ತೆರಳುತ್ತಿರುವುದನ್ನು ಕಂಡು ಪೋಷಕರು ಹಾಗೂ ಸಂಬಂಧಿಕರು ಕೊಣಾಜೆ ಠಾಣೆಯ ಅಂಗಳದಲ್ಲೇ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು. ಧರ್ಮಬೋಧನೆಯ ಹೆಸರಿನಲ್ಲಿ ಯುವತಿಯ ಜೀವನ ಹಾಳುಮಾಡಿದ ಈ ಧರ್ಮಗುರುವನ್ನು ಮುಸ್ಲಿಂ ಸಮಾಜ ತಕ್ಷಣವೇ ಬಹಿಷ್ಕರಿಸಬೇಕು ಎಂದು ಯುವತಿಯ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.











