ಪುತ್ತೂರು : ಮೂರು ದಶಕಗಳ ನಿರಂತರ ಕಲಾಸಾಧನೆ, ನೃತ್ಯ ಪರಂಪರೆಯ ಪೋಷಣೆ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯ ಸಾರ್ಥಕ ಪಯಣಕ್ಕೆ ಸಾಕ್ಷಿಯಾಗಿರುವ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ತನ್ನ 30ನೇ ವರ್ಷದ ಸಂಭ್ರಮದಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಸಂಸ್ಥೆಯು, ಇದೀಗ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಪುತ್ತೂರಿನ ತೆಂಕಿಲದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತೆರೆದ ಸಭಾಂಗಣದಲ್ಲಿ ‘ಮೂಕಾಂಬಿಕಾ ಮೂವತ್ತರ ಮಾರ್ದನಿ’ ಎಂಬ ವಿಶಿಷ್ಟ ಕಲಾ ಪ್ರಸ್ತುತಿಯನ್ನು ಆಯೋಜಿಸಿದೆ.
ಸಂಸ್ಥೆಯ ನೃತ್ಯ ನಿರ್ದೇಶಕರು ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೂರದರ್ಶನ ಏಕೈಕ ಎ ಟಾಪ್ ಗ್ರೇಡ್ ಕಲಾವಿದ ವಿದ್ವಾನ್ ಬಿ. ದೀಪಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಶಕಗಳಿಂದ ನೃತ್ಯಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಕಾಡೆಮಿ, ಕಲಾಸಕ್ತರ ಮನದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. ಹತ್ತು ತಿಂಗಳ ಹಿಂದೆ ‘ನೃತ್ಯೋತ್ಮಮಣ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮೂರು ದಶಕಗಳ ಹಿಂದಿನ ತನ್ನ ರಂಗಪ್ರವೇಶದ ಕ್ಷಣಗಳನ್ನು ಮರುಸೃಷ್ಟಿಸಿ ಯಶಸ್ವಿಯಾಗಿ ಪ್ರಸ್ತುತಪಡಿಸಿದ್ದ ವಿದ್ವಾನ್ ಬಿ ದೀಪಕ್ ಕುಮಾರ್ ಅವರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ಪತ್ರಿಕಾಗೋಷ್ಟಿಯಲ್ಲಿ ವಿದ್ವಾನ್ ಬಿ ದೀಪಕ್ ಕುಮಾರ್ ಅವರು ಮಾತನಾಡಿ ಅ.31ಕ್ಕೆ ಬೆಳಿಗ್ಗೆ ಗಂಟೆ 9.30ಕ್ಕೆ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಆಡಳಿತ ಮಂಡಳಿ ಪ್ರಧಾನ ನಿರ್ದೇಶಕ ಮುಳಿಯ ಕೇಶವಪ್ರಸಾದ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಈ ಸಂದರ್ಭ ಹಿರಿಯ ವಿದ್ಯಾರ್ಥಿಗಳಿಂದ ಉದ್ಘಾಟನಾ ನೃತ್ಯ ನಡೆಯಲಿದೆ. ಬಳಿಕ ವಿವಿದ ಶಾಖೆಯ ನೃತ್ಯ ಪ್ರಸ್ತುತಿ ನಡೆಯಲಿದೆ. ಸಂಸದ ಕ್ಯಾ। ಬ್ರಿಜೇಶ್ ಚೌಟ ಅವರು ಶುಭನುಡಿಯನ್ನಾಡಲಿದ್ದಾರೆ ಎಂದು ಬಿ ದೀಪಕ್ ಕುಮಾರ್ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರವಾಗಿ ಮೋಹಿನಿಯಾಟ್ಟಂ ಕೂಚುಪುಡಿ, ಕಥಕ್ ನೃತ್ಯ ನಡೆಯಲಿದೆ ಎಂದು ದೀಪಕ್ ಕುಮಾರ್ ಹೇಳಿದರು.
ಹಿರಿಯ ವಿದ್ಯಾರ್ಥಿಗಳ ನೃತ್ಯ ಹಳೇ ಹೆಜ್ಜೆ ಹೊಸ ಭಾವ’ ಮಧ್ಯಾಹ್ನದ ಊಟದ ಬಳಿಕ ರಸ ಪ್ರಶ್ನೆ ‘ ರಸ-ಸರಸ ಕಾರ್ಯಕ್ರಮ ನಡೆಯಲಿದ್ದು, ಕೃಷ್ಣವೇಣಿಪ್ರಸಾದ್ ಮುಳಿಯ ಇದನ್ನು ನಿರ್ವಹಿಸಲಿದ್ದಾರೆ. ಇದೇ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ಶುಭನುಡಿಯನ್ನಾಡಲಿದ್ದಾರೆ. ಬಳಿಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರಸ್ತುತಿ ನಡೆಯಲಿದೆ ಎಂದವರು ಹೇಳಿದರು.
ಸಂಜೆ ಗಂಟೆ 6 ರಿಂದ ಸಂಸ್ಥೆಯ ಶಾಖೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಿಂದ ನೃತ್ಯ ಪ್ರದರ್ಶನ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ವಿಶೇಷ ನೃತ್ಯ ಪ್ರಸ್ತುತಿಯಾಗಿ ನವದುರ್ಗೆ ಮತ್ತು ಅಷ್ಟಲಕ್ಷ್ಮೀ, ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ಕಲಾವಿದರಿಂದ ಲೀಲಾಮಾನುಷ ವಿಗ್ರಹ ನೃತ್ಯ ಪ್ರಸ್ತುತಿ ನಡೆಯಲಿದೆ. ಬೆಂಗಳೂರಿನ ಪ್ರವೀಣ್ ರಾವ್ ಸಂಗೀತ ನೀಡಲಿದ್ದಾರೆ ಎಂದು ವಿದಾನ್ ಬಿ ದೀಪಕ್ ಕುಮಾರ್ ಹೇಳಿದರು.
ಸಂಜೆ ಗಂಟೆ 5 ರಿಂದ ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಂಗೀತ ಸಂಭ್ರಮ ನಡೆಯಲಿದೆ. ಇದೇ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಬಳಿಕ ಸಂಸ್ಥೆಯ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ನಡೆಯಲಿದೆ ಎಂದು ವಿದ್ವಾನ್ ಬಿ ದೀಪಕ್ ಕುಮಾರ್ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನೃತ್ಯ ಮತ್ತು ಸಂಗೀತ ಶಿಕ್ಷಕಿ ವಿದುಷಿ ಪ್ರೀತಿಕಲಾ ಉಪಸ್ಥಿತರಿದ್ದರು.













