ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಸೌಜನ್ಯ ಮತ್ತು ಅವರ ತಾಯಿ ಕುಸುಮಾವತಿ ಅವರ ನಡುವಿನ ಸಂಬಂಧದ ಕುರಿತು ತನಿಖೆ ನಡೆಸುವಂತೆ ಧರ್ಮಸ್ಥಳದ ನಿವಾಸಿ ಕಿಶೋರ್ ಎಂಬುವವರು ವಿಶೇಷ ತನಿಖಾ ದಳಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿರುವ ಕಿಶೋರ್, ಕುಸುಮಾವತಿ ಅವರು ಸೌಜನ್ಯ ಅವರ ತಾಯಿಯೇ ಎಂಬುದರ ಕುರಿತು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಇಂದಿರಾವತಿ ಎಂಬ ಮಹಿಳೆಯ ಹೆಸರಿನಲ್ಲಿ 2015ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಧರ್ಮಸ್ಥಳ ಪಾಂಗಳ ಗ್ರಾಮದಲ್ಲಿ ಜಮೀನು ಮಂಜೂರಾಗಿರುವುದನ್ನೂ ಉಲ್ಲೇಖಿಸಿ, ಆ ಜಮೀನಿನ ಸ್ವಾಧೀನ ಕುಸುಮಾವತಿ ಅವರ ಹೆಸರಿನಲ್ಲಿದೆ ಎಂದು ಹೇಳಲಾದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ, ಇಂದಿರಾವತಿ ಅವರು ಪಾಂಗಳ ಗ್ರಾಮದಲ್ಲಿ ವಾಸವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಇಂದಿರಾವತಿ ಮತ್ತು ಕುಸುಮಾವತಿ ಒಬ್ಬರೇ ಎಂಬುದಾಗಿ ಸಲ್ಲಿಸಿರುವ ಪ್ರಮಾಣಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯ ದಾಖಲೆಗಳಲ್ಲಿ ವ್ಯತ್ಯಾಸಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸೌಜನ್ಯ ಮತ್ತು ಅವರ ಸಹೋದರಿ ಸೌಮ್ಯ ಅವರು ಕುಸುಮಾವತಿ ಅವರ ಹೆತ್ತ ಮಕ್ಕಳೇ ಎಂಬ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿರುವ ಕಿಶೋರ್, ಸೌಜನ್ಯ ಅವರ ಜನನ ನೋಂದಣಿ, ಆಸ್ಪತ್ರೆ ಹಾಗೂ ಶಾಲಾ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ವೈಜ್ಞಾನಿಕ ಪರೀಕ್ಷೆಯ ಮೂಲಕವೂ ತನಿಖೆ ನಡೆಸಬೇಕು ಎಂದು ವಿನಂತಿಸಿದ್ದಾರೆ.
ಇನ್ನು ಚಂದಪ್ಪ ಗೌಡರ ಕುಟುಂಬದ ವಂಶವೃಕ್ಷದ ಪರಿಶೀಲನೆ ಮತ್ತು ಮಾವ ವಿಠಲ ಗೌಡ ಅವರ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.














