ಮಂಗಳೂರಿನಲ್ಲಿ ಲಾಡ್ಜ್‌ಗೆ ತೆರಳುತ್ತಿದ್ದ ವ್ಯಕ್ತಿಯ ಅಪಹರಣ! ಬರೋಬ್ಬರಿ 1.15 ಕೋಟಿ ರೂಪಾಯಿ ದೋಚಿದ ದುಷ್ಕರ್ಮಿಗಳು!

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಲಾಡ್ಜ್‌ಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಲವಂತವಾಗಿ ಅಪಹರಿಸಿ, ಸುಮಾರು ಎರಡು ಗಂಟೆಗಳ ಕಾಲ ನಗರದ ವಿವಿಧೆಡೆ ಸುತ್ತಾಡಿಸಿ ಬರೋಬ್ಬರಿ 1.15 ಕೋಟಿ ರೂಪಾಯಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

Advertisement

ದಾವಣಗೆರೆಯಿಂದ ಮಂಗಳೂರಿಗೆ ಹಣದ ಬ್ಯಾಗ್‌ಗಳನ್ನು ತಂದಿದ್ದ ಸತ್ಯನಾರಾಯಣ ಎಂಬುವವರೇ ದರೋಡೆಕೋರರ ಟಾರ್ಗೆಟ್ ಆಗಿದ್ದಾರೆ. ಅಕ್ಟೋಬರ್ 23ರಂದು ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬುವವರು ಸತ್ಯನಾರಾಯಣ ಅವರಿಗೆ ಹಣದ ಬ್ಯಾಗ್‌ಗಳನ್ನು ನೀಡಿ, ಮಂಗಳೂರಿಗೆ ತೆರಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಉಳಿದುಕೊಳ್ಳುವಂತೆ ಸೂಚಿಸಿದ್ದರು.

Advertisement
Advertisement

ಅದರಂತೆ ಅಕ್ಟೋಬರ್ 27ರಂದು ರಾತ್ರಿ ದಾವಣಗೆರೆಯಿಂದ ಬಸ್ ಹತ್ತಿದ್ದ ಸತ್ಯನಾರಾಯಣ, ಅಕ್ಟೋಬರ್ 28ರಂದು ಬೆಳಗ್ಗೆ ಸುಮಾರು 6 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಲಾಲ್‌ಬಾಗ್‌ನ ರಾಮಕೃಷ್ಣ ಹಾಸ್ಟೆಲ್ ಬಳಿ ಇಳಿದಿದ್ದರು. ಬಳಿಕ ಫುಟ್‌ಪಾತ್‌ನಲ್ಲಿ ತಿಂಡಿ ತಿನ್ನಲು ತೆರಳುತ್ತಿದ್ದ ವೇಳೆ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಮುಖಕ್ಕೆ ಮಫ್ಲರ್ ಧರಿಸಿದ್ದ ನಾಲ್ವರು ಅಪರಿಚಿತರು ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ನಗರದ ವಿವಿಧೆಡೆ ಸುತ್ತಾಡಿಸಿದ ದುಷ್ಕರ್ಮಿಗಳು, ಸತ್ಯನಾರಾಯಣ ಅವರ ಬಳಿಯಿದ್ದ ಎರಡು ಬ್ಯಾಗ್‌ಗಳಲ್ಲಿನ ಕೋಟ್ಯಂತರ ರೂಪಾಯಿ ನಗದು ಹಣ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಕಾವೂರು ಬಸ್ ನಿಲ್ದಾಣದ ಸಮೀಪದ ನಿರ್ಜನ ಗುಡ್ಡದ ಮೇಲೆ ಸತ್ಯನಾರಾಯಣ ಅವರನ್ನು ಕಾರಿನಿಂದ ಕೆಳಕ್ಕೆ ತಳ್ಳಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಸತ್ಯನಾರಾಯಣ ಅವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಪೊಲೀಸರು, ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page