ಮಧ್ಯಪ್ರದೇಶ : ಚಾಕೋಲೆಟ್ ವಿಚಾರಕ್ಕೆ ಆದ ಜಗಳವೊಂದು ಮಗುವಿನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಮಂದಸೌರ್‌ನಲ್ಲಿ ನಡೆದಿದೆ.
ಶಾಮ್‌ಗಢದಲ್ಲಿ ಚಾಕೋಲೆಟ್ ವಿಚಾರಕ್ಕಾಗಿ ನಾಲ್ಕು ವರ್ಷದ ಬಾಲಕನ ತಾಯಿಯೊಬ್ಬರು ಪಕ್ಕದ ಮನೆಯ 12 ವರ್ಷದ ಬಾಲಕಿಗೆ ಬೈದಿದ್ದರು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಬಾಲಕಿ ಆಂಟಿಯ ಮೇಲೆ ಸೇಡುತೀರಿಸಿಕೊಳ್ಳಲು ಅವರ ಮಗನನ್ನು ನೀರಿನ ಟ್ಯಾಂಕರ್‌ಗೆ ತಳ್ಳಿ ಕೊಲೆ ಮಾಡಿದ್ದಾಳೆ. ಬಾಲಕನನ್ನು ಆಟಾಡೋಣ ಎಂದು ಮಹಡಿಯ ಮೇಲೆ ಕರೆದುಕೊಂಡು ಹೋಗಿ ನೀರಿನ ಟ್ಯಾಂಕ್‌ನಲ್ಲಿ ಏನೋ ಇದೆ ನೋಡು ಎಂದು ಹೇಳಿದ್ದಾಳೆ. ಬಾಲಕ ಬಗ್ಗಿದ ವೇಳೆ ಆತನನ್ನು ತಳ್ಳಿ ಮೇಲೆ ಮುಚ್ಚಳ ಮುಚ್ಚಿ ಓಡಿಹೋಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ವರ್ಷದ ಕಂದನಾದ ಕಾರಣ ಮಗುವಿಗೆ ಈಜಲಾಗದೇ, ಮೇಲೆ ಬರಲೂ ಆಗದೇ ಉಸಿರುಗಟ್ಟಿ ಮಗು ಮೃತಪಟ್ಟಿದೆ. ಬಾಲಕನ ತಾಯಿ ಜೋರು ಮಾಡಿದ ಹಿನ್ನೆಲೆ ಸೇಡಿಗಾಗಿ ಬಾಲಕಿ ಹೀಗೆ ಮಾಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತ್ಯ ಎಸಗಿದ ಬಾಲಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.













