ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ,ಗ್ರಾಮ ಪಂಚಾಯತ್ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ್ ರೈ ಪೋಷಕತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ನಡೆದ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” ಅಭಿಯಾನದಡಿ ಕಳೆದ ಐದು ವರ್ಷಗಳಿಂದ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ ಅವರು ಗ್ರಾಮೀಣ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಆಸಕ್ತಿ ಬೆಳೆಸಲು ಶ್ರಮಿಸುತ್ತಿದ್ದಾರೆ.
22 ಗ್ರಾಮ ಪಂಚಾಯತ್ ವ್ಯಾಪ್ತಿಯ 32 ಗ್ರಾಮಗಳಲ್ಲಿ ಪ್ರತಿ ತಿಂಗಳು ಗ್ರಾಮ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಗ್ರಾಮೀಣ ಹಾಗೂ ನಗರಸಭಾ ವ್ಯಾಪ್ತಿಯ 162 ಶಾಲೆಗಳ 6,000ಕ್ಕೂ ಅಧಿಕ ಸಾಹಿತ್ಯ ಆಸಕ್ತ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ, ಕಥಾಗೋಷ್ಠಿ, ಪ್ರವಾಸ ಕಥನ, ನನ್ನ ನೆಚ್ಚಿನ ಶಿಕ್ಷಕ/ಶಿಕ್ಷಕಿ ಮತ್ತು ನನ್ನ ಆಪ್ತಮಿತ್ರ ಎಂಬ ಐದು ಪ್ರಕಾರದ ಗೋಷ್ಠಿಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಕಾರ್ಯಕ್ರಮದಲ್ಲಿ “ಕನ್ನಡದಲ್ಲೂ ಐಎಎಸ್ ಬರೆಯಿರಿ” ಕಾರ್ಯಾಗಾರ ನಡೆಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮೂಡಿಸುವ ಜೊತೆಗೆ, 200ಕ್ಕೂ ಅಧಿಕ ಸಾಧಕರನ್ನು ಗುರುತಿಸಿ ಗೌರವಿಸಲಾಗಿದೆ.













