ನಟ ದರ್ಶನ್, ತಮ್ಮ ಮಗ ವಿನೀಶ್ 18ನೇ ವರ್ಷದ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ವಿಶೇಷ ಉಡುಗೊರೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಈ ಬಾರಿ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಆದರೆ, ಮಗನನ್ನು ಜೈಲಿನಲ್ಲಿ ಭೇಟಿಯಾದ ಸಂದರ್ಭದಲ್ಲಿ ತಮಗೆ ಲಭ್ಯವಿದ್ದ ಪುಟ್ಟ ಚಾಕೊಲೇಟ್ ಅನ್ನೇ ಉಡುಗೊರೆಯಾಗಿ ನೀಡಿದ್ದಾರೆ. ಅಪ್ಪನ ಈ ಸಿಂಪಲ್ ಗಿಫ್ಟ್ ಕಂಡು ವಿನೀಶ್ ಭಾವುಕರಾಗಿದ್ದಾರೆ.
ನಟ ದರ್ಶನ್ ಮಗ ವಿನೀಶ್ ಇದೀಗ 18ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ಮಕ್ಕಳ ಹುಟ್ಟುಹಬ್ಬ ಎಂದರೆ ತಂದೆ-ತಾಯಿಗೆ ವಿಶೇಷ ಸಂಭ್ರಮ. ಇಂತಹ ವಿಶೇಷ ಸಂದರ್ಭದಲ್ಲಿ ಮಗನ ಜೊತೆಗಿದ್ದು ಸಂಭ್ರಮಿಸಬೇಕಿದ್ದ ದರ್ಶನ್ ಮಾತ್ರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾರಣ ಈ ಬಾರಿ ಮಗನ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಲು ಸಾಧ್ಯವಾಗಿಲ್ಲ.
ದರ್ಶನ್ ನೀಡಿದ ಚಾಕೊಲೇಟ್ ಫೋಟೋವನ್ನು ವಿನೀಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಪಂಚದಲ್ಲಿ ಅಪ್ಪ ಕೊಟ್ಟ ಈ ಉಡುಗೊರೆಗಿಂತ ದೊಡ್ಡದು ಬೇರೇನೂ ಇಲ್ಲ ಎಂದು ಪೋಸ್ಟ್ ಮಾಡಿದ್ದಾರೆ.













