ಕನ್ನಡವು ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕ. ಏಕೀಕರಣದ ಹೋರಾಟ ಹಾಗೂ ಶ್ರೀಮಂತ ಸಾಹಿತ್ಯ ಪರಂಪರೆ ನಮ್ಮ ನಾಡು ಜಗತ್ತಿನಾದ್ಯಂತ ಪಸರಿಸಿದೆ. ಜಾಗತೀಕರಣದ ಯುಗದಲ್ಲಿ ಇತರ ಭಾಷೆಗಳನ್ನು ಕಲಿಯುತ್ತಲೇ ಮಾತೃಭಾಷೆಯ ಮೆರುಗನ್ನು ಕಾಪಿಟ್ಟುಕೊಳ್ಳಬೇಕು. ಕನ್ನಡದ ಪ್ರೀತಿ ಕೇವಲ ನವೆಂಬರ್ ತಿಂಗಳ ಆಚರಣೆಗೆ ಸೀಮಿತವಾಗದೆ, ನಮ್ಮ ದೈನಂದಿನ ಮಾತು, ಶಿಕ್ಷಣ, ತಂತ್ರಜ್ಞಾನ ಹಾಗೂ ಮುಂದಿನ ಪೀಳಿಗೆಯ ಬದುಕಿನಲ್ಲಿ ಸದಾ ಜೀವಂತವಾಗಿರಬೇಕು.
ಇಂದು ನಾವು ಹೆಮ್ಮೆಯಿಂದ ಕರ್ನಾಟಕವೆಂದು ಕರೆಯುವ ಈ ನಾಡು ಒಮ್ಮೆ ವಿವಿಧ ಆಡಳಿತ ಪ್ರಾಂತ್ಯಗಳಲ್ಲಿ ಹಂಚಿಹೋಗಿತ್ತು. ಕನ್ನಡ ಮಾತನಾಡುವ ಜನರು ಬೇರೆಬೇರೆ ಆಡಳಿತ ವ್ಯವಸ್ಥೆಗಳ ಅಡಿಯಲ್ಲಿ ಬದುಕುತ್ತಿದ್ದ ಕಾಲದಲ್ಲಿ, ಕನ್ನಡಿಗರನ್ನು ಒಂದೇ ರಾಜ್ಯದ ಅಡಿಯಲ್ಲಿ ಒಗ್ಗೂಡಿಸಬೇಕೆಂಬ ಕನಸು ಮೂಡಿತು. ಆ ಕನಸಿಗೆ ಶಕ್ತಿಯಾದವರು ಅನೇಕ ಹೋರಾಟಗಾರರು, ಸಾಹಿತಿಗಳು, ಚಿಂತಕರು ಮತ್ತು ಕನ್ನಡಾಭಿಮಾನಿಗಳು.
ಕನ್ನಡದ ಅನೇಕ ಮಹನೀಯರು ಕನ್ನಡಿಗರಲ್ಲಿ ಏಕತೆಯ ಅರಿವು ಮೂಡಿಸಲು ಶ್ರಮಿಸಿದರು. ಅವರ ಪರಿಶ್ರಮ ಮತ್ತು ಜನರ ದೀರ್ಘಕಾಲದ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಭಾಷಾವಾರು ಪ್ರಾಂತ್ಯಗಳ ಪುನರ್‌ರಚನೆಯೊಂದಿಗೆ ವಿಶಾಲ ಮೈಸೂರು ರಾಜ್ಯ ಉದಯಿಸಿತು. ನಂತರ 1973ರ ನವೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ನೇತೃತ್ವದಲ್ಲಿ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.












