ಅಯೋಧ್ಯೆ : ರಾಮಜನ್ಮಭೂಮಿ ಪ್ರಕರಣದಲ್ಲಿ 2019 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿ ನಂತೆಯೇ ನಿಗದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಲಾಗಿದೆಯೇ ಎಂಬುದನ್ನು ಸರ್ವೆಗಳು ಹಾಗೂ ಗಡಿ ಗುರುತುಗಳ ಮೂಲಕ ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ರಾಮಜನ್ಮಭೂಮಿ ಕೇಸ್ ಟ್ರಸ್ಟ್ ಎಂಬ ಸಂಸ್ಥೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ನವೆಂಬರ್ 2 ರಂದು ಅರ್ಜಿಯ ವಿಚಾರಣೆ ನಡೆಯಲಿದೆ. ಯಾವ ವಿವಾದಿತ ಸ್ಥಳಕ್ಕಾಗಿ ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತೋ ಅದೇ ಜಾಗದಲ್ಲಿ ಮಂದಿರ ನಿರ್ಮಾಣವಾಗಿದೆಯೇ ಇಲ್ಲವೇ ಎಂಬುದನ್ನು ಅರಿಯುವ ಉದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ಒಂದು ವೇಳೆ ಮರುಸರ್ವೇ ಅಡಿ ನಿಗದಿತ ಜಾಗದಲ್ಲಿ ಮಂದಿರ ನಿರ್ಮಾಣವಾಗಿಲ್ಲವಾದರೆ 2019 ರ ತೀರ್ಪಿನಲ್ಲಿ ಉಲ್ಲೇಖಿಸಿರುವ ಜಾಗದಲ್ಲೇ ಮಂದಿರ ನಿರ್ಮಿಸುವಂತೆ ಸೂಚಿಸಬೇಕು ಎಂದು ದೂರುದಾರ ಟ್ರಸ್ಟ್ ಕೋರಿದೆ.











