ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದ ಖಾಸಗಿ ಜೆಟ್ ವಿಮಾನವೊಂದು ಕ್ಷಿಪಣಿಯಂತೆ ಕೆಳಕ್ಕೆ ಧಾವಿಸಿ ಜನವಸತಿ ಪ್ರದೇಶದಲ್ಲಿ ನೆಲಕ್ಕೆ ಅಪ್ಪಳಿಸಿ ಸ್ಪೋಟಗೊಂಡಿದೆ. ಘಟನೆಯಲ್ಲಿ ವಿಮಾನದಲ್ಲಿದ್ದ ಎಲ್ಲ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಭಾನುವಾರ ನಡೆದಿರುವುದಾಗಿ ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್‌ನಿಂದ ಸುಮಾರು 14 ಕಿಲೋಮೀಟರ್ (9ಮೈಲಿ) ದೂರದಲ್ಲಿರುವ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್‌ಹಾವನ್ ಬಳಿ ಈ ದುರಂತ ಸಂಭವಿಸಿದೆ. ಜನನಿಬಿಡ ಪ್ರದೇಶದಲ್ಲಿರುವ ಮುಖ್ಯರಸ್ತೆಗೆ ವಿಮಾನ ಅಪ್ಪಳಿಸಿದ್ದು ಪರಿಣಾಮ ರಸ್ತೆಯ ಮಧ್ಯೆ ಬೃಹತ್ ಗುಂಡಿ ನಿರ್ಮಾಣವಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಅಪಘಾತದ ಭೀಕರ ದೃಶ್ಯಗಳು ರಸ್ತೆಯಲ್ಲಿ ಸಾಗುತ್ತಿದ್ದ ಕಾರುಗಳ ಡ್ಯಾಸ್‌ಕ್ಯಾಮ್‌ಗಳಲ್ಲಿ ಸೆರೆಯಾಗಿವೆ. ಆಕಾಶದಿಂದ ಕ್ಷಣಾರ್ಧದಲ್ಲಿ ಜೆಖಗೆ ಬಿದ್ದು ಸ್ಫೋಟಗೊಂಡ ವಿಮಾನದಿಂದ ದಟ್ಟವಾದ ಕಪ್ಪು ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಚಿಮ್ಮುತ್ತಿರುವುದು ವೀಡಿಯೊಗಳಲ್ಲಿ ಕಂಡುಬಂದಿದೆ. ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫ್ಫಿ ಅವರು ಎಕ್ಸ್ ಖಾತೆಯಲ್ಲಿ ಈ ದುರಂತವನ್ನು ದೃಡಪಡಿಸಿದ್ದು, ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಟೆಕ್ಸಾಸ್‌ನ ಆಸ್ಟಿನ್‌ನಿಂದ ಹೊರಟಿದ್ದ ಈ ವಿಮಾನವು ಬಹಾಮಾಸ್‌ಗೆ ತೆರಳುತ್ತಿತ್ತು. ಘಟನೆಯ ಬಗ್ಗೆ ತೀವ್ರ ಕಂಬನಿ ಮಿಡಿದಿರುವ ಅವರು, ಫೆಡರಲ್ ಏನಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ನ್ಯಾಷನಲ್ ಟ್ರಾನ್ಸ್‌ಪೋರ್ಟೇಷನ್ ಸೇಫ್ಟಿ ಬೋರ್ಡ್ ತಂಡಗಳು ಅಪಘಾತ್ ಕಾರಣಗಳ ಬಗ್ಗಎ ಮಗ್ರ ತನಿಖೆ ನಡೆಸುತ್ತಿವೆ ಎಂದು ಹೇಳಿದ್ದಾರೆ.












