ವೇಣೂರು : ಇತಿಹಾಸ ಪ್ರಸಿದ್ಧ ವೇಣೂರು ಮುದ್ದಾಡಿ ಪರಿಸರದಲ್ಲಿ ಮರವಂಡಿ, ಕೊಡಮಣಿತ್ತಾಯ ಹಾಗೂ ಮೈಸಂದಾಯ ದೈವಗಳ ಒಟ್ಟುಗೂಡುವ ನೇಮೋತ್ಸವಕ್ಕೆ ವಿಶೇಷ ಕಾರ್ಣಿಕ ಹಾಗೂ ಪುರಾತನ ಇತಿಹಾಸವಿದೆ. ವೇಣೂರು, ಬಜಿರೆ, ಗುಂಡೂರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಧಾರ್ಮಿಕ ನಂಬಿಕೆ ಮತ್ತು ತುಳುನಾಡಿನ ಸಾಂಪ್ರದಾಯಿಕ ಪರಂಪರೆಯೊಂದಿಗೆ ಈ ಕ್ಷೇತ್ರವು ನಿಕಟ ಸಂಬಂಧ ಹೊಂದಿದೆ.
ಇಂತಹ ಪವಿತ್ರ ಧಾರ್ಮಿಕ ಸ್ಥಳದಲ್ಲಿ ಎರಡು ಗುತ್ತು ಮನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ನಡುವೆ ಉಂಟಾದ ಘರ್ಷಣೆ ಇದೀಗ ದೈವಗಳ ಧರ್ಮಚಾವಡಿಯ ಮುಂದೆಯೇ ಗಲಾಟೆ ನಡೆಯುವ ಹಂತಕ್ಕೆ ತಲುಪಿರುವುದು ಸ್ಥಳೀಯರಲ್ಲಿ ಕಳವಳ ಮೂಡಿಸಿದೆ.
ತುಳುನಾಡಿನ ದೈವಾರಾಧನೆ ಕೇವಲ ಧಾರ್ಮಿಕ ಆಚರಣೆಯಲ್ಲ ಅದು ಊರಿನ ಜನರ ನಂಬಿಕೆ, ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ಇಂತಹ ಪವಿತ್ರ ಸನ್ನಿಧಿಯಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ಭಿನ್ನಾಭಿಪ್ರಾಯಗಳು ಘರ್ಷಣೆಯ ರೂಪ ಪಡೆಯುವುದು ವಿಷಾದನೀಯ ಬೆಳವಣಿಗೆಯಾಗಿದೆ.
ಗುತ್ತು ಮನೆಗಳ ಪರಂಪರೆ ಹಾಗೂ ದೈವಾರಾಧನೆಯ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಸಂಯಮದಿಂದ ವರ್ತಿಸಿ, ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂಬುದು ಸಾರ್ವಜನಿಕರ ಆಶಯವಾಗಿದೆ.
ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅವುಗಳನ್ನು ಕಾನೂನುಬದ್ಧ ಹಾಗೂ ಶಾಂತಿಯುತ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು. ಈ ಘಟನೆಯ ನೈಜ ಹಿನ್ನೆಲೆ, ಘರ್ಷಣೆಗೆ ಕಾರಣ ಹಾಗೂ ಸಂಬಂಧಪಟ್ಟವರ ನಿಲುವುಗಳ ಕುರಿತು ಅಧಿಕೃತ ಮಾಹಿತಿ ಲಭ್ಯವಾದ ಬಳಿಕವೇ ಸಂಪೂರ್ಣ ಚಿತ್ರಣ ಸ್ಪಷ್ಟವಾಗಬೇಕಿದೆ ಎಂದು ತಿಳಿದು ಬಂದಿದೆ.












