ಪುತ್ತೂರು : ಇತ್ತಿಚೇಗಷ್ಟೇ ಪುತ್ತೂರು ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಕುರಿತು ಮಾತನಾಡುವ ಭರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ದೇವಳದ ಭಕ್ತರ ಕುರಿತು ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಧರ್ಮಕ್ಕೆ ತಿನ್ನುವವರು ಎಂಬ ಮಾತನ್ನಾಡಿದ್ದರು. ಇದರಿಂದ ಪುತ್ತೂರಿನ ಭಕ್ತ ಸಮೂಹವೇ ತಿರುಗಿ ಬಿದ್ದಿದ್ದು, ಶಾಸಕರು ಮಾತನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಕುರಿತು ಸ್ಥಳೀಯ, ಸಾಮಾಜಿಕ ಕಾರ್ಯಕರ್ತ ಹರೀಶ್ ನೆಲ್ಲಿಕಟ್ಟೆ ಮಾಧ್ಯಮದಲ್ಲಿ ಮಾತನಾಡಿ ತೀವ್ರವಾಗಿ ಖಂಡಿಸಿದ್ದಾರೆ.
ಹರೀಶ್ ನೆಲ್ಲಿಕಟ್ಟೆ ಅವರ ಮಾತುಗಳು ಹೀಗಿವೆ : ಜಾತ್ರೆ ಕಳೆದು ಒಂದು ವರ್ಷವಾಗುತ್ತಾ ಬಂದರೂ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇನ್ನೂ ಕೂಡ ಪ್ರಶ್ನಾ ಚಿಂತನೆ ಏಕೆ ಇಟ್ಟಿಲ್ಲ? ಒಂದು ವೇಳೆ ಚಿಂತನೆ ಇಟ್ಟರೆ ಶಾಸಕರ ಬಂಡವಾಳ ಹೊರಗೆ ಬರುತ್ತದೆ ಎಂಬ ಭಯ ಇವರಿಗಿದೆ. ಹಿಂದಿನ ಚಿಂತನೆಯಲ್ಲಿ ಕಂಡುಬಂದಂತೆ ದೇವಸ್ಥಾನದ ಮುಂಭಾಗದಲ್ಲಿ ದೇವರಿಗೆ ಕದಿರು ಬೆಳೆಯಬೇಕಿತ್ತು. ಆದರೆ ಇವರು ಅದೇ ಜಾಗದಲ್ಲಿ ರೋಡ್ ಮಾಡಲು ಹೊರಟಿದ್ದಾರೆ. ಎಲ್ಲವೂ ಶಾಸಕರೇ ನಿರ್ಧರಿಸುವುದಾದರೇ ಭಕ್ತಾದಿಗಳಿಗೆ ಮರ್ಯಾದೆ ಇಲ್ವಾ?
ಶಾಸಕರೇ ಹೇಳಿದಂತೆ ದೇವಸ್ಥಾನದ ಸಮಿತಿಗೆ ದುಡ್ಡು ಕೊಟ್ಟವರನ್ನು ಮಾತ್ರ ಸೇರಿಸುತ್ತಾರೆ. ಬಡ ಭಕ್ತಾದಿಗಳು ಇವರಿಗೆ ಅಗತ್ಯವಿಲ್ಲ. ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ಇವೆಲ್ಲವೂ ಎಂದಿಗೂ ನಡೆಯುವುದಿಲ್ಲ. ನಾವು ಹುಟ್ಟಿನಿಂದಲೇ ಮಹಾಲಿಂಗೇಶ್ವರ ದೇವರನ್ನು ನೋಡಿಕೊಂಡು ಬಂದವರು. ಇಂದು ನಿನ್ನೆ ಬಂದ ಶಾಸಕರು ಮಾತ್ರ ದರ್ಪದಿಂದ ವರ್ತಿಸುತ್ತಾರೆ.
ಸರಿಯಾಗಿ ಗಮನಿಸಿದರೆ ಜಾಗದ ವಿಷಯದಲ್ಲಿ ಶಾಸಕರು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಹೇಳಿದಂತೆ ಕಾನೂನಿನ ಮೂಲಕ ಹೋದರೆ 25 ವರ್ಷ ಬೇಕು ಎಂದಿದ್ದರು. ಹಾಗಾದ್ರೆ ಇವರು ಕನೂನನ್ನು ಕೈಗೆ ತೆಗೆದುಕೊಂಡು ದೇವಸ್ಥಾನದ ಅಭಿವೃದ್ಧಿ ಹೆಸರಲ್ಲಿ ಜನರನ್ನು ಮಂಗ ಮಾಡುತ್ತಿದ್ದರೆ ಎಂಬುವುದರ್ಲಿ ಸಂಶಯವಿಲ್ಲ. ಇನ್ನು ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಕ್ಕಿದ ಸಂದರ್ಭದಲ್ಲಿ ದೇವಸ್ಥಾನದ ಹೊರಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿದ್ದರು. ಇವರ ಭಾಷಣ ನಡೆಯುವಾಗ ಒಳಗೆ ದೇವರಿಗೆ ಮಹಾಪೂಜೆ ನಡೆಯುತ್ತಿತ್ತು. ಆದರೂ ಇವರ ಭಾಷಣ ನಿಲ್ಲಿಸಲಿಲ್ಲ. ಇದು ಅಹಂಕಾರವಲ್ಲದೆ ಮತ್ತೇನು ಎಂದು ಕಿಡಿಕಾರಿದರು.
ಇನ್ನು ಅಶೋಕ್ ಕುಮಾರ್ ರೈಯವರು ದೇವಳಕ್ಕೆ ಬರುವ ಭಕ್ತರು ಧರ್ಮಕ್ಕೆ ತಿಂದು ಹೋಗುವವರು ಎಂದು ಹೇಳಿದ್ದಾರೆ. ಮಹಾಲಿಂಗೇಶ್ವರ ದೇವರ ಅನ್ನಪ್ರಸಾದವನ್ನು ಹೀಗೆ ಅಲ್ಲಗೆಳೆದ ನಿಮಗೆ ಜನರೇ ಬುದ್ಧಿ ಕಲಿಸುತ್ತಾರೆ. ಇದು ಸಾವಿರಾರು ಭಕ್ತರಿಗೆ ಮಾಡಿದ ಅವಮಾನ. ನಿಮ್ಮ ಮೇಲೆ ನಮಗಿರುವ ಗೌರವವನ್ನು ನೀವೇ ಕಳೆದುಕೊಂಡಿರಿ. ಇನ್ನು ಮುಂದೆ ದೇವರ ಅನ್ನಪ್ರಸಾದ ಸ್ವೀಕರಿಸಬೇಕಾದರೆ ಶಾಸಕರ ಅನುಮತಿ ತೆಗೆದುಕೊಳ್ಳುವ ದಿನ ಬರಬಹುದು ಎಂದು ನೋವು ತೋಡಿಕೊಂಡರು.















