ಪೊಲೀಸ್‌ ಇಲಾಖೆಯ ನಿರ್ಲ್ಯಕ್ಷದಿಂದಲೇ ಪೆರ್ಡೂರಿನ ಪ್ರದೀಪ್‌ ಪೂಜಾರಿ ಆತ್ಮಹತ್ಯೆ! ಮನಕಲಕುವ ಮನೆಯ ವಾತಾವರಣ ಕಂಡು ಎಂಎಲ್‌ಸಿ ಕಿಶೋರ್‌ ಬೊಟ್ಯಾಡಿ ಭಾವುಕ!!

ಉಡುಪಿ : ಪ್ರೀತಿಯ ಹೆಸರಿನಲ್ಲಿ ನಂಬಿಸಿ, ಎಂಟು ವರ್ಷಗಳ ಒಡನಾಟದ ನಂತರ ತಿರಸ್ಕರಿಸಿ, ನೆಮ್ಮದಿಯಿಂದ ಬದುಕಲು ಬಿಡಿ ಎಂದು ವಿನಂತಿಸಲು ಹೋದ ಯುವಕನ ಮೇಲೆ ನಡುರಸ್ತೆಯಲ್ಲೇ ಹಾಡುಹಗಲೇ ಬೆನ್ನಿನ ಚರ್ಮ ಸುಲಿಯುವಂತೆ ಅಮಾನುಷವಾಗಿ ಹಲ್ಲೆ ನಡೆಸಿದ್ದಲ್ಲದೆ, ನ್ಯಾಯ ಕೇಳಲು ಹೋದಾಗ ದೂರು ಸ್ವೀಕರಿಸದೆ ಅಮಾನವೀಯವಾಗಿ ನಡೆದುಕೊಂಡ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಲೇ ಪೆರ್ಡೂರಿನ ಯುವಕ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಪೆರ್ಡೂರಿನಲ್ಲಿರುವ ಪ್ರದೀಪ್ ಪೂಜಾರಿ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿದ ಶಾಸಕರು, ಮೃತ ಯುವಕನ ತಾಯಿ ಅಮೃತಾ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ಮಗನನ್ನು ಕಳೆದುಕೊಂಡು ಎದೆಬಡಿದುಕೊಂಡು ಕಣ್ಣೀರಿಡುತ್ತಿದ್ದ ಆ ತಾಯಿಯ ಆಕ್ರಂದನ ಹಾಗೂ ದುಃಖವನ್ನು ನೋಡಲು ಸಾಧ್ಯವಾಗುತ್ತಿಲ್ಲ, ಇಡೀ ಮನೆಯ ವಾತಾವರಣ ಮನಕಲಕುವಂತಿದೆ ಎಂದು ಶಾಸಕರು ಭಾವುಕರಾದರು.

Advertisement

ಅವರ ಮನೆಯ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದರೆ ಸಾಕು, ಆ ಕುಟುಂಬದ ಪರಮ ಬಡತನ ಎದ್ದು ಕಾಣುತ್ತದೆ. ಪ್ರದೀಪ್ ಒಬ್ಬ ಕಟ್ಟಾ ಬಡ ಕುಟುಂಬದ ಯುವಕ ಹಾಗೂ ಬಡ ಕಾರ್ಯಕರ್ತನಾಗಿದ್ದ ಕಾರಣಕ್ಕಾಗಿಯೇ ಇಡೀ ವ್ಯವಸ್ಥೆ ಆತನನ್ನು ಇಷ್ಟೊಂದು ಕೀಳಾಗಿ ಕಂಡಿತೇ ಎಂಬ ನೋವು ಕಾಡುತ್ತಿದೆ. ಇದೇ ಜಾಗದಲ್ಲಿ ಪ್ರದೀಪ್ ಬದಲಿಗೆ ಯಾವುದಾದರೂ ಹಣದ ಬಲವಿದ್ದ ಶ್ರೀಮಂತ ವ್ಯಕ್ತಿ ಅಥವಾ ಪ್ರಭಾವಿ ಕುಟುಂಬದ ಯುವಕನಾಗಿದ್ದರೆ ಪೊಲೀಸ್ ಇಲಾಖೆ ಇದೇ ರೀತಿ ಅಸಡ್ಡೆ ತೋರುತ್ತಿತ್ತೇ? ಹಣವಿದ್ದವರ ವಿಚಾರವಾಗಿದ್ದರೆ ಮರುಕ್ಷಣವೇ ಓಡೋಡಿ ಬಂದು ಕ್ರಮ ಕೈಗೊಳ್ಳುತ್ತಿದ್ದ ಪೊಲೀಸರು, ಈ ಬಡ ಜೀವ ರಕ್ತಸಿಕ್ತವಾಗಿ ಆಸ್ಪತ್ರೆಯ ಮಂಚದ ಮೇಲೆ ನರಳುತ್ತಿದ್ದಾಗ ದೂರು ಪಡೆಯಲು ಯಾಕೆ ಮೀನಮೇಷ ಎಣಿಸಿದರು ಎಂದು ಕಿಶೋರ್ ಕುಮಾರ್ ಪುತ್ತೂರು ನೇರವಾಗಿ ಪ್ರಶ್ನಿಸಿದರು.

ಪೊಲೀಸ್ ಇಲಾಖೆ ಹಾಗೂ ಕಾನೂನು ವ್ಯವಸ್ಥೆ ಸದಾ ನಿಷ್ಪಕ್ಷಪಾತವಾಗಿರಬೇಕು. ಬಡವ-ಶ್ರೀಮಂತ ಎಂಬ ಆರ್ಥಿಕ ಹಿನ್ನೆಲೆ ಅಥವಾ ಸಾಮಾಜಿಕ ಸ್ಥಾನಮಾನವನ್ನು ನೋಡಿ ನ್ಯಾಯ ತೀರ್ಮಾನ ಮಾಡುವುದು ಅಕ್ಷಮ್ಯ ಅಪರಾಧ. ಹಲ್ಲೆಗೊಳಗಾಗಿ ತನಗೆ ನ್ಯಾಯ ಸಿಗುವುದಿಲ್ಲ, ತನ್ನ ಬಡತನವೇ ಶಾಪವಾಯಿತೇ ಎಂದು ನೊಂದು ಬೆಂದು ಅಸಹಾಯಕತೆಯಿಂದ ಆ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಆದ್ದರಿಂದ ಕೇವಲ ಕರ್ತವ್ಯಲೋಪ ಎಂದು ಪ್ರಕರಣವನ್ನು ಮುಚ್ಚಿಹಾಕದೆ, ಪ್ರದೀಪ್ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿದ ಗೂಂಡಾಗಳನ್ನು ತಕ್ಷಣವೇ ಬಂಧಿಸಬೇಕು ಹಾಗೂ ಬಡ ಯುವಕನ ದೂರನ್ನು ಕಸದ ಬುಟ್ಟಿಗೆ ಎಸೆದು ಆತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣರಾದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಮೇಲೂ ಕ್ರಿಮಿನಲ್ ಪ್ರಕರಣ ದಾಖಲಿಸಿ ಅಮಾನತುಗೊಳಿಸಬೇಕು ಎಂದು ಶಾಸಕರು ಗೃಹ ಇಲಾಖೆಯನ್ನು ಬಲವಾಗಿ ಒತ್ತಾಯಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page