ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಕದ್ದಾಲಿಸುತ್ತಿದ್ದಾರೆ ಎಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ‘ಆಸ್ಕ್ ಮಿ’ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಫೋನ್ ಅನ್ನು ಕೈಯಲ್ಲಿ ಹಿಡಿದು ತೋರಿಸುತ್ತಾ ಪ್ರಧಾನಿ ವಿರುದ್ಧದ ಎಲ್ಲಾ ಸಾಕ್ಷ್ಯಗಳು ಇದೇ ಫೋನ್‌ನಲ್ಲಿವೆ ಎಂದು ಹೇಳಿದ್ದಾರೆ. ಅಲ್ಲದೆ, ವಿವಿಧ ವಿಷಯಗಳ ಕುರಿತು ಪ್ರಧಾನಿಯೊಂದಿಗೆ ಮುಖಾಮುಖಿ ಬಹಿರಂಗ ಚರ್ಚೆಗೆ ಬರುವಂತೆ ತಮ್ಮ ಸವಾಲನ್ನು ಪುನರುಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಲ್ಲಾ ಸಾಕ್ಷ್ಯಗಳು ಈ ಫೋನ್‌ನಲ್ಲಿವೆ ಮತ್ತು ಪ್ರಧಾನಿ ನನ್ನ ಫೋನ್ ಕದ್ದಾಲಿಸುತ್ತಿರುವುದರಿಂದ ಅವರಿಗೆ ಈ ಬಗ್ಗೆ ತಿಳಿದಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ, ಫೋನ್ ಕದ್ದಾಲಿಕೆಯ ಆರೋಪವನ್ನು ಸಾಬೀತುಪಡಿಸುವ ಯಾವುದೇ ತಾಂತ್ರಿಕ ಪುರಾವೆಗಳನ್ನು ಅವರು ಈ ಸಂವಾದದ ವೇಳೆ ಒದಗಿಸಲಿಲ್ಲ. ಚುನಾವಣಾ ಪ್ರಕ್ರಿಯೆ, ವಿದೇಶಿ ಪ್ರಭಾವ ಮತ್ತು ರಾಷ್ಟ್ರೀಯ ಭದ್ರತೆಯಂತಹ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಕಳೆದ 12 ದಿನಗಳಲ್ಲಿ ಇದು 7ನೇ ಬಾರಿಗೆ ಅವರು ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ. ವಿದೇಶಿ ನಿಯಂತ್ರಣದಲ್ಲಿ ಯಾರಿದ್ದಾರೆ ಮತ್ತು ದೇಶದ್ರೋಹಿಗಳು ಯಾರು ಎಂಬುದನ್ನು ಮುಖಾಮುಖಿ ಚರ್ಚೆಯು ಶಾಶ್ವತವಾಗಿ ಇತ್ಯರ್ಥ ಪಡಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.













