ಸ್ಪೈಸ್‌ ಜೆಟ್‌ ವಿಮಾನಗಳಿಗೆ ದುಬೈನಲ್ಲಿ ದಿಗ್ಬಂಧನ! ಭಾರತಕ್ಕೆ ಬರಬೇಕಿದ್ದ ನಾಲ್ಕು ವಿಮಾನಗಳು ರದ್ದು!!

ದುಬೈ : ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಗೆ 14 ಮಿಲಿಯನ್ ದಿರ್ಹಮ್ (ಸುಮಾರು 35.8 ಕೋಟಿ ರೂ.) ಬಾಕಿ ಪಾವತಿಸದ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ ವಿಮಾನಗಳ ಚೆಕ್ಇನ್ ಸೇವೆಯನ್ನು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರುವಾರದಿಂದ ಸ್ಥಗಿತಗೊಳಿಸಿದೆ. ಇದರಿಂದ ದುಬೈನಿಂದ ಸ್ಪೈಸ್‌ಜೆಟ್ ವಿಮಾನಗಳ ನಿರ್ಗಮನ ಕಾರ್ಯಾಚರಣೆಗೆ ಭಾರೀ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

Advertisement

ಚೆಕ್-ಇನ್ ಸೇವೆ ಸ್ಥಗಿತಗೊಂಡ ನಂತರವೂ ವಿಮಾನ ರದ್ದತಿಯ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಲು ವಿಫಲವಾದ ಹಿನ್ನೆಲೆಯಲ್ಲಿ, ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರವು (DCAA) ಸ್ಪೈಸ್‌ಜೆಟ್‌ನ ಸ್ಟೇಷನ್ ಮ್ಯಾನೇಜರ್ ಅವರಿಗೆ ಸಮನ್ಸ್ ಜಾರಿಮಾಡಿದೆ. ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ತಕ್ಷಣವೇ ಪರ್ಯಾಯ ಪ್ರಯಾಣದ ವ್ಯವಸ್ಥೆ ಕಲ್ಪಿಸುವಂತೆ ಪ್ರಾಧಿಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎಂದು ಆಂತರಿಕ ಇಮೇಲ್‌ವೊಂದರಿಂದ ತಿಳಿದು ಬಂದಿದೆ.

Advertisement

ಅಕ್ಟೋಬರ್ 13ರಿಂದ ಸ್ಪೈಸ್‌ಜೆಟ್‌ನಿಂದ ಯಾವುದೇ ಪಾವತಿ ಬಂದಿಲ್ಲ ಹಾಗೂ ಒಟ್ಟು ಬಾಕಿ ಮೊತ್ತ 14 ಮಿಲಿಯನ್ ದಿರ್ಹಮ್‌ಗೆ ತಲುಪಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕರು ಸೋಮವಾರವೇ ಸಂಸ್ಥೆಗೆ ತಿಳಿಸಿದ್ದರು. ನವೆಂಬರ್ 12ರೊಳಗೆ ಸಂಪೂರ್ಣ ಬಾಕಿ ಪಾವತಿಸದಿದ್ದರೆ ಚೆಕ್-ಇನ್ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಗುರುವಾರದಿಂದ ಸೇವೆ ಸ್ಥಗಿತಗೊಳಿಸಲಾಗಿದೆ. ಸೇವೆ ಸ್ಥಗಿತಗೊಳ್ಳುವ ಮುನ್ನವೇ ಹೊರಡಬೇಕಿದ್ದ ಅಹಮದಾಬಾದ್ (SG-5115) ಮತ್ತು ದೆಹಲಿ (SG-5106) ಮಾರ್ಗದ ಎರಡು ವಿಳಂಬಿತ ವಿಮಾನಗಳಿಗೆ ಮಾತ್ರ ಚೆಕ್-ಇನ್ ಪ್ರಕ್ರಿಯೆ ನಡೆಸಲು ಗ್ರೌಂಡ್ ಹ್ಯಾಂಡ್ಲಿಂಗ್ ಪಾಲುದಾರ ಸಂಸ್ಥೆಯಾದ ‘ಡಿನಾಟಾ’ಗೆ (dnata) ವಿಮಾನ ನಿಲ್ದಾಣ ಆಡಳಿತ ಅನುಮತಿ ನೀಡಿತು. ಉಳಿದೆಲ್ಲಾ ವಿಮಾನಗಳ ಚೆಕ್-ಇನ್ ಸ್ಥಗಿತಗೊಂಡಿದ್ದರಿಂದ, ದುಬೈನಿಂದ ಹೊರಡಬೇಕಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸುವಂತೆ ಸ್ಪೈಸ್‌ಜೆಟ್‌ನ ದುಬೈ ಸ್ಟೇಷನ್ ಮ್ಯಾನೇಜರ್ ಕಾರ್ಯಾಚರಣೆ ತಂಡಕ್ಕೆ ಸೂಚಿಸಿದರು. ಇದರ ಪರಿಣಾಮವಾಗಿ ನವೆಂಬರ್ 12ರಂದು ದುಬೈನಿಂದ ಅಮೃತಸರ, ಜೈಪುರ, ಮುಂಬೈ ಮತ್ತು ದೆಹಲಿಗೆ ತೆರಳಬೇಕಿದ್ದ ನಾಲ್ಕು ವಿಮಾನಗಳನ್ನು ರದ್ದುಗೊಳಿಸಲಾಯಿತು ಎಂದು ಮೂಲಗಳು ಹೇಳಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page